ನವದೆಹಲಿ (ಪಿಟಿಐ): ಉತ್ತರ ಭಾರತದಲ್ಲಿ ವರುಣನ ಆರ್ಭಟ ಭಾನುವಾರವೂ ಮುಂದುವರೆದಿದ್ದು ಹಲವು ನದಿಗಳು ಆಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ಉತ್ತರಾಖಂಡದಲ್ಲಿ ಭಾರೀ ಮಳೆಗೆ ಮೃತಪಟ್ಟರ ಸಂಖ್ಯೆ 34ಕ್ಕೆ ಏರಿದೆ.
ಡೆಹ್ರಾಡೂನ್ ವರದಿ: ಉತ್ತರಾಖಂಡ ರಾಜ್ಯದ ಅನೇಕ ಕಡೆ ಎಡೆಬಿಡದೆ ಸುರಿಯುತ್ತಿರುವ ಮಳೆಯ ಪ್ರವಾಹಕ್ಕೆ ಅನೇಕ ಗ್ರಾಮಗಳ ಮನೆಗಳು ನೀರುಪಾಲಾಗಿದ್ದು, ಈವರೆಗೆ 34 ಮಂದಿ ಸಾವಿಗೀಡಾಗಿದ್ದಾರೆ. ಉತ್ತರಕಾಶಿಯಲ್ಲೇ 31 ಮಂದಿ ಸತ್ತಿದ್ದಾರೆ ಮತ್ತು ಆರು ಮಂದಿ ಕಾಣೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ರಾಜೇಶ್‌ಕುಮಾರ್ ಹೇಳಿದ್ದಾರೆ.
ಶನಿವಾರ ಕಾಣೆಯಾಗಿದ್ದ ಯುಜೆವಿಎನ್ ಕಾರ್ಖಾನೆಯ 23ಜನ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಸ್ಥಳೀಯ ಪೊಲೀಸರು ಮತ್ತು ಐಟಿಬಿಪಿ ಯೋಧರು ಕಾಣೆಯಾದವರ ಪತ್ತೆಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಗಂಗಾ, ಸರಸ್ವತಿ, ಶಾರದಾ ಮತ್ತು ಘಾಗ್ರ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ರಾಜ್ಯದ ಹಲವೆಡೆ ಪ್ರವಾಹ ಭೀತಿ ಎದುರಾಗಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ನದಿ ಮುಖಜ ಪ್ರದೇಶಗಳಾದ ಅಯೋಧ್ಯ, ಬರಾಬಂಕಿ, ಖೇರಿ, ಬಲಿಯಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರ ವರದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರಿಯಾಸಿ, ಸಾಂಬಾ, ಉದಂಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಈ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿರುವುದರಿಂದ ನೂರಾರು ಮನೆಗಳು ಮುಳುಗಡೆಯಾಗಿದ್ದು ಸಾವಿರಾರು ಎಕರೆಯಲ್ಲಿದ್ದ ಬೆಳೆ ನಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಲ್ಲಿ ಸಿಲುಕಿದ್ದ 24 ಜನರನ್ನು ರಕ್ಷಿಸಲಾಗಿದೆ. ಇದುವರೆಗೂ ಪ್ರಾಣಿ ಹಾನಿಯಾದ ವರದಿಯಾಗಿಲ್ಲ.
ರಾಜಧಾನಿ ದೆಹಲಿಯಲ್ಲೂ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. 35.5ರಷ್ಟಿದ್ದ ಉಷ್ಣಾಂಶ 27.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಇ್ಲ್ಲಲಿಯವರೆಗೂ 0.8 ಮಿ.ಮೀಟರ್ ಮಳೆಯಾಗಿದೆ. ಮಳೆಯಿಂದ ಅನಾಹುತಗಳು ಸಂಭವಿಸಿದ ವರದಿಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.