ನವದೆಹಲಿ: ಕರ್ನಾಟಕದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿ-ಎನ್‌ಆರ್‌ಇಜಿಎಸ್) ಜಾರಿ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್, `ಈ ಯೋಜನೆ ಜಾರಿಯಲ್ಲಿನ ನ್ಯೂನತೆಗೆ ಸಂಬಂಧಿಸಿದ ದೂರುಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರ ವಿಫಲವಾಗಿದೆ~ ಎಂದು ಗುರುವಾರ ಕಿಡಿಕಾರಿದ್ದಾರೆ.
`ಸಾರ್ವಜನಿಕ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಈ ಬಗ್ಗೆ ಆಗಾಗ ದೂರುಗಳು ಬಂದಿದ್ದು, ರಾಜ್ಯವು ಸಕಾಲದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ~ ಎಂದು ಸಚಿವರು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಬರೆದ ಪತ್ರದಲ್ಲಿ ತಾಕೀತು ಮಾಡಿದ್ದಾರೆ.
`ಯೋಜನೆ ಅಡಿ 2012ರ ಮಾರ್ಚ್ 3ರವರೆಗೆ 356 ಕೋಟಿ ರೂಪಾಯಿ ಬಾಕಿ ಇರುವುದಾಗಿ ರಾಜ್ಯ ಸರ್ಕಾರವು ಇದೇ 1ರಂದು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ. ಆದರೆ ಈ ಅವಧಿಯಲ್ಲಿ ಒಟ್ಟು ಅನುದಾನದ ಲಭ್ಯತೆ 391 ಕೋಟಿ ರೂಪಾಯಿ ಆಗಿತ್ತು ಎನ್ನುವುದು ಎಂಜಿ-ಎನ್‌ಆರ್‌ಇಜಿಎಸ್ ಅಂತರ್ಜಾಲ ತಾಣದಿಂದ ಪಡೆದ ವರದಿಯಿಂದ ಗೊತ್ತಾಗುತ್ತದೆ. ಅನುದಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನೀಡುವಲ್ಲಿ ಸರ್ಕಾರ ಅಸಡ್ಡೆ ತೋರಿದೆ~ ಎಂದು ಸಚಿವರು ಆರೋಪಿಸಿದ್ದಾರೆ.
ದೂರಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಂಡ ವರದಿ ಸಲ್ಲಿಕೆಯಾಗದಿದ್ದರೂ, 2012ರ ಏಪ್ರಿಲ್ 1ರವರೆಗೆ ಆರಂಭಿಕ ಸಿಲ್ಕು ಸಾಕಷ್ಟಿದ್ದರೂ, 2012-13ನೇ ಸಾಲಿನಲ್ಲಿ ಸಚಿವಾಲಯವು 700 ಕೋಟಿ ರೂಪಾಯಿ ಆರಂಭಿಕ ಮೊತ್ತ ಬಿಡುಗಡೆ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
`ಯೋಜನೆ ಅಡಿಯಲ್ಲಿ ಕೈಗೊಂಡ ನಿರ್ಮಾಣ ಕಾಮಗಾರಿಗಳ ಸದ್ಬಳಕೆಗೆ ಹಾಗೂ ಅವುಗಳ ಸುಸ್ಥಿರತೆ ಕಾಪಾಡಲು ಸರ್ಕಾರ ಪ್ರತ್ಯೇಕ ಮೇಲ್ವಿಚಾರಣಾ ಘಟಕವನ್ನು ಸ್ಥಾಪಿಸುವ ಅಗತ್ಯವಿದೆ. ಇದರ ಜತೆಗೆ, ಉದ್ಯೋಗ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸುವ ಕಾರ್ಯ ಕೂಡ ಆಗಬೇಕಿದೆ. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಹಾಕಬೇಕು~ ಎಂದು ಜೈರಾಂ ಪತ್ರದಲ್ಲಿ ಸೂಚಿಸಿದ್ದಾರೆ.
ರಾಜ್ಯದಲ್ಲಿ ಈ ಯೋಜನೆ ಅಡಿ ಪೂರ್ಣಗೊಂಡ ಕಾಮಗಾರಿಗಳ ಪ್ರಮಾಣ ಅತ್ಯಂತ ಕಡಿಮೆ ಇದೆ. ಒಂದು ವೇಳೆ ಕೆಲಸ ಸಂಪೂರ್ಣವಾಗಿ ಮುಗಿದರೆ, ಇದಕ್ಕೆ ಆದ್ಯತೆ ಮೇರೆಗೆ ಪ್ರಮಾಣಪತ್ರವನ್ನು ನೀಡಬೇಕು ಮತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆಯಲ್ಲಿ (ಎಂಐಎಸ್) ದತ್ತಾಂಶಗಳನ್ನು ದಾಖಲಿಸಬೇಕು. ಇವನ್ನೆಲ್ಲ ತ್ವರಿತ ಗತಿಯಲ್ಲಿ ಮಾಡಬೇಕು ಎಂದು ಸಚಿವರು ಎಚ್ಚರಿಸಿದ್ದಾರೆ.
ಈ ಯೋಜನೆಗೆ ಕರ್ನಾಟಕದಲ್ಲಿ ಹಣಕಾಸು ಕೊರತೆ ಇಲ್ಲ. ಈಗಾಗಲೇ ಬಿಡುಗಡೆ ಮಾಡಿರುವ ಅನುದಾನವನ್ನು ರಾಜ್ಯ ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತದೆ ಎನ್ನುವುದರ ಮೇಲೆ ಮುಂದಿನ ಕಂತನ್ನು ನೀಡಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.