ADVERTISEMENT

ಉ.ಪ್ರದೇಶ: ಅಂಬೇಡ್ಕರ್ ಪ್ರತಿಮೆಗೂ ಕೇಸರಿ ಬಣ್ಣ!

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST

ಲಖನೌ: ಭಾವಚಿತ್ರ ಹಾಗೂ ಪ್ರತಿಮೆಗಳಲ್ಲಿ ಅಂಬೇಡ್ಕರ್‌ ಅವರ ಕೋಟು ಸಾಮಾನ್ಯವಾಗಿ ಕಪ್ಪು ಅಥವಾ ನೀಲಿ ಬಣ್ಣದಲ್ಲಿರುತ್ತದೆ. ಆದರೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯೊಂದು ಸಂಪೂರ್ಣ ಕೇಸರಿಮಯವಾಗಿದೆ.

ಜಿಲ್ಲೆಯ ಕುಂವರ್‌ಗಾಂವ್ ಗ್ರಾಮದಲ್ಲಿ ಶುಕ್ರವಾರ ಅಂಬೇಡ್ಕರ್ ಪ್ರತಿಮೆ ವಿರೂಪಗೊಂಡು ಉದ್ವಿಗ್ನ ವಾತಾವರಣ ಉಂಟಾಗಿತ್ತು. ಇದರಿಂದಾಗಿ ಶೀಘ್ರವೇ ಹೊಸ ಪ್ರತಿಮೆ ಸ್ಥಾಪಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು.

ಭಾನುವಾರ ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಅಂಬೇಡ್ಕರ್ ಅವರ ಹೊಸ ಪ್ರತಿಮೆ ಅನಾವರಣಗೊಂಡಿತು. ಆದರೆ ಈ ಪ್ರತಿಮೆ ಸಂಪೂರ್ಣವಾಗಿ ಕೇಸರಿ ಬಣ್ಣದಲ್ಲಿ ಇದ್ದುದನ್ನು ನೋಡಿ ಜನರುಆಶ್ಚರ್ಯಗೊಂಡರು. ಜಿಲ್ಲಾಡಳಿತ ಈ ಕುರಿತು ಯಾವುದೇ ವಿವರಣೆ ನೀಡಿಲ್ಲ.

ADVERTISEMENT

ಯಾವುದೇ ಸಮುದಾಯದ ನಾಯಕರ ಪ್ರತಿಮೆ ವಿರೂಪಗೊಳ್ಳದಂತೆ ಕ್ರಮ ಕೈಗೊಳ್ಳಲು ಹಾಗೂ ಎಚ್ಚರಿಕೆಯಿಂದ ಇರಲು ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮಾತ್ರ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು ರಾಜ್ಯ ಬಿಜೆಪಿ ಸರ್ಕಾರ, ಹಜ್ ಭವನ ಸೇರಿದಂತೆ ಸರ್ಕಾರಿ ಕಟ್ಟಡಗಳು, ಬಸ್‌ಗಳು, ಶಾಲಾ ಕಟ್ಟಡಗಳು ಹಾಗೂ ಪಠ್ಯಪುಸ್ತಕಗಳನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.