ADVERTISEMENT

ಉಭಯ ಸದನಗಳಲ್ಲಿ ಶ್ರದ್ಧಾಂಜಲಿ, ಕಲಾಪ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

ನವದೆಹಲಿ: ದಕ್ಷಿಣ ಆಫ್ರಿಕಾದ ಹಿರಿಯ ನಾಯಕ ನೆಲ್ಸನ್‌ ಮಂಡೇಲಾ ಅವರಿಗೆ ಸಂಸತ್ತಿನ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವರ್ಣಭೇದ ನೀತಿ ವಿರುದ್ಧ ಹೋರಾಡಿದ ದಿವ್ಯ ಚೇತನದ ಅಗಲುವಿಕೆಯು ನಿರಂಕುಶ ಪ್ರಭುತ್ವ ಮತ್ತು ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಶೂನ್ಯವನ್ನು ಸೃಷ್ಟಿಸಿದೆ ಎಂದು ವಿವಿಧ ಪಕ್ಷಗಳ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ. ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ದೇಶದಾದ್ಯಂತ ಸಂತಾಪ: ಮಂಡೇಲಾ ಅವರ ನಿಧನಕ್ಕೆ ರಾಜಕೀಯ ಮುಖಂಡರು ಸೇರಿದಂತೆ ವಿವಿಧ ಕ್ಷೇತ್ರ­ಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಜೊಹಾನ್ಸ್ ಬರ್ಗ್‌ (ಪಿಟಿಐ): ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್‌ ಮಂಡೇಲಾ ಅವರೊಂದಿಗೆ ಭಾರತದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾವನಾತ್ಮಕ ಕ್ಷಣಗಳನ್ನು ಕಳೆದಿದ್ದರು.  2007ರಲ್ಲಿ ನೆಲ್ಸನ್ ಮಂಡೇಲಾ ಅವರೊಂದಿಗೆ ಮಾತನಾಡಿದ್ದ ಸೋನಿಯಾ, ತಮ್ಮ ಪತಿ ರಾಜೀವ್‌ ಗಾಂಧಿ ಹಾಗೂ ಅತ್ತೆ ಇಂದಿರಾ ಗಾಂಧಿ  ಹೇಗೆ ದಕ್ಷಿಣ ಆಫ್ರಿಕಾಕ್ಕೆ ಬೆಂಬಲಿಸಿದ್ದರು ಎಂಬುದನ್ನು ಹಂಚಿಕೊಂಡಿದ್ದರು.

‌‌ಆಫ್ರಿಕನ್‌ ನ್ಯಾಷನಲ್ ಕಾಂಗ್ರೆಸ್‌ನ ಕಚೇರಿಯನ್ನು ದೆಹಲಿಯಲ್ಲಿ ತೆರೆಯಲು ಇಂದಿರಾ ಗಾಂಧಿ ಸಹಕರಿ ಸಿದ್ದರು. ಆಫ್ರಿಕಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೊಳ್ಳುವಲ್ಲಿ ಬೆಂಬಲ ನೀಡಿದ ದೇಶಗಳ ಪೈಕಿ ಭಾರತದ ಹೆಸರು ಮುಂಚೂಣಿಯಲ್ಲಿತ್ತು ಎಂದು ಸೋನಿಯಾ ಗಾಂಧಿ ಅವರು, ಮಂಡೇಲಾ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಹಂಚಿಕೊಂಡಿದ್ದರು.

ತಂದೆಯನ್ನೇ ಕಳೆದುಕೊಂಡಿದ್ದೇವೆ
ಮಹಾತ್ಮ ಗಾಂಧಿ ಅವರಂತೆ ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದ್ದ ಮಂಡೇಲಾ ಅವರ ಅಗಲಿಕೆಯಿಂದ ನಾವು ಅನಾಥರಾಗಿದ್ದೇವೆ. ತಂದೆಯನ್ನೇ ಕಳೆದುಕೊಂಡಂತಾಗಿದೆ. ಇಡೀ ಮನುಕುಲಕ್ಕೆ ಸೇರಿದ ವ್ಯಕ್ತಿ ನಮ್ಮ ಕಾಲದಲ್ಲಿ ಜೀವಿಸಿದ್ದಕ್ಕೆ ನಾವೆಲ್ಲ ಕೃತಜ್ಞರಾಗಿರಬೇಕು.
–ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.