ADVERTISEMENT

ಉಸಿರುಗಟ್ಟಿ ಸಾದಿಕ್ ಸಾವು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST
ಉಸಿರುಗಟ್ಟಿ ಸಾದಿಕ್ ಸಾವು
ಉಸಿರುಗಟ್ಟಿ ಸಾದಿಕ್ ಸಾವು   

ಚೆನ್ನೈ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣದ ಪ್ರಮುಖ ಆರೋಪಿ ಎ.ರಾಜಾ ಅವರ ನಿಕಟವರ್ತಿ ಸಾದಿಕ್ ಬಚ್ಚ ಉಸಿರುಗಟ್ಟಿ ಸತ್ತಿದ್ದಾರೆ ಎಂದು ಅವರ ಶವಪರೀಕ್ಷೆ ನಡೆಸಿದ ವೈದ್ಯರು ಗುರುವಾರ ತಿಳಿಸಿದ್ದಾರೆ.

ಈ ನಡುವೆ ಬುಧವಾರ ನಿಗೂಢ ರೀತಿಯಲ್ಲಿ ಸಾವಿಗೀಡಾದ ಸಾದಿಕ್ ವಿರುದ್ಧ ದಾಖಲಾಗಿರುವ ಆತ್ಮಹತ್ಯೆ ಪ್ರಕರಣವನ್ನು ತಮಿಳುನಾಡು ಸರ್ಕಾರ ಸಿಬಿಐಗೆ ವರ್ಗಾಯಿಸಿದೆ.

‘ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ವಿಧಿವಿಜ್ಞಾನ ವರದಿ ಬಂದ ಬಳಿಕವಷ್ಟೇ ಹೇಗೆ ಉಸಿರುಗಟ್ಟಿದೆ ಎಂಬುದು ತಿಳಿಯುತ್ತದೆ. ಇನ್ನು 2 ವಾರಗಳಲ್ಲಿ ವರದಿ ಸಿದ್ಧವಾಗಲಿದೆ. ಶವಪರೀಕ್ಷೆಯ ಸಂಪೂರ್ಣ ದೃಶ್ಯಗಳ ವಿಡಿಯೊ ಚಿತ್ರೀಕರಣ ಮಾಡಲಾಗಿದೆ’ ಎಂದು ಡಾ. ವಿ.ದೇಕಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರೋಯಪೆಟ್ಟ ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ ಬೆಳಿಗ್ಗೆ ಸುಮಾರು ಮೂರು ಗಂಟೆ ಕಾಲ ಸಾದಿಕ್ ಅವರ ಶವಪರೀಕ್ಷೆ ನಡೆಸಿತು. ಆಸ್ಪತ್ರೆಯ ಆವರಣದಲ್ಲಿದ್ದ ಅವರ ಸಂಬಂಧಿಕರು ಮಾಧ್ಯಮಗಳ ವಿರುದ್ಧ ಕೂಗಾಡಿದ್ದರಿಂದ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಅವರನ್ನು ಸಾಂತ್ವನಗೊಳಿಸಿದರು. ನಂತರ ಶವವನ್ನು ಸಾದಿಕ್ ಅವರ ಬಂಧುಗಳಿಗೆ ಹಸ್ತಾಂತರಿಸಲಾಯಿತು. ಸಾದಿಕ್ ಹಾಗೂ ರಾಜಾ ಅವರ ತವರೂರಾದ ಪೆರಂಬಲೂರಿನಲ್ಲಿ ಅಂತ್ಯಕ್ರಿಯೆ ನಡೆಯುವ ನಿರೀಕ್ಷೆ ಇದೆ.

ಸಾದಿಕ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ‘ಗ್ರೀನ್‌ಹೌಸ್ ಪ್ರಮೋಟರ್ಸ್’ ಸಂಸ್ಥೆ ಹಗರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳ ಪರಿಶೀಲನೆಗೆ ಒಳಗಾಗಿತ್ತು. ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿಗಳು ನಡೆದಿದ್ದವು. ಕಳೆದ ಎರಡು ತಿಂಗಳಲ್ಲಿ ಕನಿಷ್ಠ ನಾಲ್ಕು ಬಾರಿ ಸಾದಿಕ್ ವಿಚಾರಣೆಗೆ ಒಳಗಾಗಿದ್ದರು.

ತಮ್ಮ ಮನೆಯ ಕೊಠಡಿಯಲ್ಲಿ ಸಾದಿಕ್ ಬುಧವಾರ ನೇಣು ಹಾಕಿಕೊಂಡಿದ್ದಾಗಿ ಅವರ ಪತ್ನಿ ಮತ್ತು ಕಾರು ಚಾಲಕ ತಿಳಿಸಿದ್ದು, ತನಿಖೆಯ ಒತ್ತಡ ಸಹಿಸಲಾಗದೇ ಅವರು ಈ ಕೃತ್ಯ ಎಸಗಿಕೊಂಡಿದ್ದಾಗಿ ಪತ್ನಿ ದೂರಿದ್ದಾರೆ. ದಾಳಿಗಳು ಮತ್ತು ವ್ಯಾಪಕ ಮಾಧ್ಯಮ ಪ್ರಚಾರದಿಂದ ತಾವು ಮುಜುಗರಕ್ಕೆ ಒಳಗಾಗಿದ್ದಾಗಿ ಸಾದಿಕ್ ಸಾವಿಗೆ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.