ADVERTISEMENT

ಉ. ಪ್ರದೇಶ: ಶೇ 56 ಮತದಾನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST
ಉ. ಪ್ರದೇಶ: ಶೇ 56 ಮತದಾನ
ಉ. ಪ್ರದೇಶ: ಶೇ 56 ಮತದಾನ   

ಲಖನೌ (ಪಿಟಿಐ): ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನ ಬುಧವಾರ ಶಾಂತಿಯುತವಾಗಿ ನಡೆದಿದ್ದು, ಶೇ 56ರಷ್ಟು ಮತದಾನವಾಗಿದೆ.

ನೆಹರೂ-ಗಾಂಧಿ ಕುಟುಂಬದ ಕಾಯಂ ಕ್ಷೇತ್ರಗಳಾದ ಅಮೇಥಿ, ರಾಯ್‌ಬರೇಲಿ ಸೇರಿದಂತೆ ಒಟ್ಟು 56 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು.

ಆಡಳಿತಾರೂಢ ಬಿಎಸ್‌ಪಿಯ ಮೂವರು ಸಂಪುಟ ದರ್ಜೆ ಸಚಿವರು, ಒಬ್ಬ ರಾಜ್ಯ ಸಚಿವ, 29 ಶಾಸಕರು, 14 ಮಾಜಿ ಸಚಿವರು ಸೇರಿದಂತೆ ಒಟ್ಟು 1,018 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಸುಲ್ತಾನ್‌ಪುರ, ಕೌಶಂಬಿ, ಅಲಹಾಬಾದ್, ವಾರಣಾಸಿ, ನಕ್ಸಲ್ ಪ್ರಭಾವವಿರುವ ಚಂದೌಳಿ, ಮಿರ್ಜಾಪುರ ಮತ್ತು ಸೋನ್‌ಭದ್ರಾ ಮತದಾನ ನಡೆದ ಇನ್ನಿತರ ಪ್ರಮುಖ ಕ್ಷೇತ್ರಗಳು. ಬೆಳಿಗ್ಗೆ 7 ಗಂಟೆಗೆ ನಿಧಾನಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ನಂತರ ಚುರುಕುಗೊಂಡಿತು.

ಇಂದಿನ ಚುನಾವಣೆಯಲ್ಲಿ 121 ಅಪರಾಧ ಹಿನ್ನೆಲೆಯುಳ್ಳ ಮತ್ತು 48 ಕೋಟ್ಯಧಿಪತಿ ಅಭ್ಯರ್ಥಿಗಳು ಕಣದಲ್ಲಿದ್ದರು. ಎಲ್ಲಿಯೂ ಅಹಿಕರ ಘಟನೆಗಳು ನಡೆದ ವರದಿಯಾಗಿಲ್ಲ.

ಒಟ್ಟು ಏಳು ಹಂತದ ಚುನಾವಣೆಯಲ್ಲಿ ಇನ್ನೂ ನಾಲ್ಕು ಹಂತದ ಮತದಾನ ಬಾಕಿ ಉಳಿದಿದೆ. ಮಾರ್ಚ್ 3ರಂದು ಕೊನೆಯ ಹಂತದ ಮತದಾನ,  6ರಂದು ಮತ ಎಣಿಕೆ ನಡೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.