ಡೆಹ್ರಾಡೂನ್ (ಪಿಟಿಐ): `ಕೇದಾರನಾಥ ಯಾತ್ರೆಯು ಎಂದೂ ಮರೆಯಲಾಗದ ದುಃಸ್ವಪ್ನ. ಅಲ್ಲಿ ದೇವಾಲಯವೊಂದನ್ನು ಬಿಟ್ಟು ಎಲ್ಲವೂ ನಿರ್ನಾಮವಾಗಿದೆ'
-ಇದು ಕೇದಾರನಾಥದಲ್ಲಿ ಜಲಪ್ರಳಯದ ದುರಂತವನ್ನು ಕಣ್ಣಾರೆ ಕಂಡ ಮಹಾರಾಷ್ಟ್ರದ ಗೋಂದಿಯಾ ನಿವಾಸಿ ಸೀತಾರಾಂ ಸುಖಾತಿಯಾ (63) ಅವರು ಡೆಹ್ರಾಡೂನ್ನಿನ ಸಹಸ್ರಧಾರ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರ ಮುಂದೆ ತೆಗೆದ ಉದ್ಗಾರ.
ಸೀತಾರಾಂ ಅವರು ಕೇದಾರನಾಥದ ಬಯಲಿನಲ್ಲಿ 12 ತಾಸುಗಳ ಕಾಲ ಮಳೆಗಾಳಿಗೆ ಮೈಯೊಡ್ಡಿ ನಿಂತಿದ್ದರು. ಪ್ರಕೃತಿ ವಿಕೋಪದ ನಡುವೆಯೂ ಅವರು ಧರಾಲಿ ಎಂಬ ಸ್ಥಳಕ್ಕೆ ನಡೆದೇ ಬಂದರು.
ತಮ್ಮ ಕಣ್ಣಮುಂದೆಯೇ ಕುಸಿದ ಕಟ್ಟಡ, ಜನ- ಜನುವಾರುಗಳು, ಅಡುಗೆ ಅನಿಲದ ಸಿಲಿಂಡರ್‌ಗಳು ಕೊಚ್ಚಿಕೊಂಡು ಹೋದ ದಾರುಣ ಘಟನೆಯನ್ನು ಬಿಡಿಸಿಟ್ಟರು. `ಅಲ್ಲಿ ನಾಶವಾಗಲು ಇನ್ನೇನೂ ಉಳಿದಿಲ್ಲ. ಕೆಲವೇ ನಿಮಿಷಗಳಲ್ಲಿ ಅಲ್ಲಿಯ ಹವಾಮಾನ ತೀವ್ರ ಪ್ರಕ್ಷುಬ್ಧಗೊಂಡಿತು. ಜನರು ಗಡಿಬಡಿಯಲ್ಲಿ ನೆಲೆ ಹುಡುಕಿ ಹೊರಟರು. ಕ್ಷಣಾರ್ಧದಲ್ಲೇ ಮಳೆ ಭೀಕರ ಸ್ವರೂಪ ಪಡೆಯಿತು. ಕೇದಾರನಾಥ ದ್ವೀಪವಾಯಿತು. ಎಲ್ಲಿ ನೋಡಿದರೂ ನೀರು, ಸಾವು, ನಾಶ...' ಎಂದು ಸರಿಯಾಗಿ ನಿಂತುಕೊಳ್ಳಲಾಗದಷ್ಟು ನಿತ್ರಾಣರಾಗಿದ್ದ ಸೀತಾರಾಂ ಹೇಳುತ್ತಲೇ ಹೋದರು..
`ಅದೊಂದು ಜಲ ದಿವ್ಯ. ಬದುಕುಳಿದಿದ್ದೇ ಪವಾಡ' ಎಂದು ಮಹಾರಾಷ್ಟ್ರದ 49 ಜನರ ಯಾತ್ರಾ ತಂಡದಲ್ಲಿದ್ದ ಸಾಕ್ಷಿ - ಸುಮಿತ್ ಬನ್ಸಲ್ ದಂಪತಿ ಜಲಪ್ರಳಯದ ಸನ್ನಿವೇಶವನ್ನು ವರ್ಣಿಸಿದರು.
`ನಮ್ಮ ಹೋಟೆಲ್‌ಗೆ ನೆರೆ ನುಗ್ಗಿತು. ಕೆಸರು, ಕಸದಿಂದ ತುಂಬಿಹೋಯಿತು. ನಮ್ಮ ಬಳಿ ಇದ್ದದ್ದು, ಬರೀ ಬಿಸ್ಕತ್‌ಗಳು. ನೀರು ಹೆಚ್ಚಿಗೆ ಇರಲಿಲ್ಲ. ನಮ್ಮ ಎಂಟು ತಿಂಗಳ ಮಗುವಿಗೆ ಕೂಡಲು ಹಾಲು ಇರಲಿಲ್ಲ' ಎಂದರು.
ಗಂಗೋತ್ರಿಗೆ ಹೋಗಿದ್ದ ಅವರು, ಮಳೆ, ನೆರೆಯ ಕಾರಣ ನೀರಿನ ಮಟ್ಟ ಏರಿದ್ದರಿಂದ ಧರಾಲಿಗೆ ವಾಪಸು ಬಂದಿದ್ದರು. ಅಲ್ಲಿ ಸಿಲುಕಿಕೊಂಡಿದ್ದ ಅವರನ್ನು ವಾಯುಪಡೆಯ ಹೆಲಿಕಾಪ್ಟರ್ ರಕ್ಷಿಸಿ ಡೆಹ್ರಾಡೂನ್‌ಗೆ ಕರೆತಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.