ADVERTISEMENT

ಎಐಸಿಸಿ, ಸಿಡಬ್ಲ್ಯುಸಿ ಪುನರ್‌ರಚನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ನವದೆಹಲಿ (ಪಿಟಿಐ, ಐಎಎನ್‌ಎಸ್): ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್, ಭಾನುವಾರ ಎಐಸಿಸಿ, ಸಿಡಬ್ಲ್ಯುಸಿ ಸೇರಿದಂತೆ ಪಕ್ಷದ ಪ್ರಮುಖ ಸಂಘಟನಾ ಘಟಕಗಳನ್ನು ಪುನರ್‌ರಚಿಸಿದೆ.

ವಿಶೇಷವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ತಮ್ಮ ರಾಜಕೀಯ ಕಾರ್ಯದರ್ಶಿಯಾಗಿ ಅಹ್ಮದ್ ಪಟೇಲ್ ಅವರನ್ನು ಉಳಿಸಿಕೊಂಡಿದ್ದಾರೆ. ಮಾಜಿ ಕೇಂದ್ರ ಸಚಿವೆ ಅಂಬಿಕಾ ಸೋನಿ ಅವರನ್ನು ಕಾಂಗ್ರೆಸ್ ಅಧ್ಯಕ್ಷರ ಕಚೇರಿ (ಸಿಪಿಒ)ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದಾರೆ.

ಈ ಹಿಂದೆ, ಅಂಬಿಕಾ ಕಾಂಗ್ರೆಸ್ ಅಧ್ಯಕ್ಷರ ಕಚೇರಿಯ ಉಸ್ತುವಾರಿ ವಹಿಸಿದ್ದಲ್ಲದೆ, ಪಟೇಲ್ ಅವರಿಗಿಂತಲೂ ಮುಂಚೆ ಸೋನಿಯಾ ರಾಜಕೀಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಚುನಾವಣಾ ತಂಡವನ್ನು ಬಲಪಡಿಸುವ ನಿಟ್ಟಿನಲ್ಲಿ ಪಕ್ಷದ ಸಂಘಟನೆಯನ್ನು ಪುನರ್‌ರಚಿಸಲಾಗಿದೆ. ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ ಅಜಯ್ ಮಾಕನ್ ಹಾಗೂ ಸಿ.ಪಿ. ಜೋಷಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

ಮಾಧ್ಯಮ ವಿಭಾಗ ಸೇರಿದಂತೆ ಹೊಸದಾಗಿ ರಚಿಸಿರುವ ಪಕ್ಷದ ಸಂಪರ್ಕ, ಪ್ರಚಾರ ಹಾಗೂ ಪ್ರಕಟಣಾ ಜವಾಬ್ದಾರಿಯನ್ನು ಮಾಕನ್ ನೋಡಿಕೊಳ್ಳಲಿದ್ದಾರೆ. ಪಕ್ಷದ ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ವ್ಯವಹಾರಗಳ ಹೊಣೆಯನ್ನು ಜೋಷಿ ಹೊರಲಿದ್ದಾರೆ.

ADVERTISEMENT

ಮಾಧ್ಯಮ ವಿಭಾಗವನ್ನು ಕಳೆದ ಆರು ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯಾಗಿ ಜನಾರ್ದನ ದ್ವಿವೇದಿ ನೋಡಿಕೊಳ್ಳುತ್ತಿದ್ದರು.ಆದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಅವರನ್ನು ಕೈಬಿಡಲಾಗಿದೆ. ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ ಇತರ ಮುಖಂಡರಲ್ಲಿ ಗುರುದಾಸ್ ಕಾಮತ್, ಮೋಹನ್ ಪ್ರಕಾಶ್, ಶಕೀಲ್ ಅಹ್ಮದ್ ಹಾಗೂ ಲೂಸಿನ್ಹೊ ಫೆಲೇರೊ ಸೇರಿದ್ದಾರೆ.

ಕೈಬಿಟ್ಟ ಪ್ರಧಾನ ಕಾರ್ಯದರ್ಶಿಗಳಲ್ಲಿ ವಿಲಾಸ್ ಮುತ್ತಮ್ವಾರ್, ಬೀರೇಂದ್ರ ಸಿಂಗ್, ಜಗಮೀತ್ ಸಿಂಗ್ ಬ್ರಾರ್, ಜಗದೀಶ್ ಟೈಟ್ಲರ್ ಹಾಗೂ ಗುಲ್ಚೈನ್ ಸಿಂಗ್ ಚರಕ್ ಒಳಗೊಂಡಿದ್ದಾರೆ.

ಸುಮಾರು 42 ಕಾರ್ಯದರ್ಶಿಗಳನ್ನು ನೇಮಿಸಲಾಗಿದ್ದು, ಸಂಸದೆ ಪ್ರಿಯಾ ದತ್ ಅವರನ್ನು ಮಾಕನ್ ಅವರಿಗೆ ಸಹಾಯಕ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. 12 ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಿದೆ. ಇನ್ನೂ ಹಲವರನ್ನು ವಿವಿಧ ಸ್ಥಾನಗಳಿಗೆ ನೇಮಕ ಮಾಡಲಾಗಿದೆ ಮತ್ತು ಅನೇಕ ಹಳಬರನ್ನು ಉಳಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.