ADVERTISEMENT

ಎನ್‌ಆರ್‌ಐ ಮದುವೆ: 7 ದಿನಗಳಲ್ಲಿ ನೋಂದಣಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಿರ್ಧಾರ

ಪಿಟಿಐ
Published 14 ಜೂನ್ 2018, 19:30 IST
Last Updated 14 ಜೂನ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅನಿವಾಸಿ ಭಾರತೀಯರು (ಎನ್‌ಆರ್‌ಐ) ಭಾರತದಲ್ಲಿ ಮದುವೆಯಾದರೆ ಏಳು ದಿನಗಳ ಒಳಗೆ ಅದನ್ನು ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಸಚಿವಾಲಯ ಹೇಳಿದೆ.

ಎನ್‌ಆರ್‌ಐ ಮದುವೆ ಏಳು ದಿನಗಳೊಳಗೆ ನೋಂದಣಿ ಆಗದೇ ಇದ್ದರೆ ಪಾಸ್‌ಪೋರ್ಟ್‌ ಮತ್ತು ವೀಸಾ ನೀಡಲಾಗುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಎನ್‌ಆರ್‌ಐ ಮದುವೆಗಳನ್ನು 48 ತಾಸುಗಳೊಳಗೆ ನೋಂದಣಿ ಮಾಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಕಳೆದ ವಾರ ಹೇಳಿದ್ದರು.

ADVERTISEMENT

ಆದರೆ, ಗೃಹ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಮತ್ತು ಮೇನಕಾ ಅವರಿದ್ದ ಸಚಿವರ ಗುಂಪು, ಎನ್‌ಆರ್‌ಐ ಮದುವೆ ನೋಂದಣಿಗೆ ಏಳು ದಿನಗಳ ಅವಕಾಶ ನೀಡಲು ನಿರ್ಧರಿಸಿದೆ.

ಎನ್‌ಆರ್‌ಐಗಳನ್ನು ಮದುವೆಯಾಗುವ ಮಹಿಳೆಯರು ಎದುರಿಸುವ ಸಮಸ್ಯೆಗಳಿಗೆ ಕಾನೂನು ಸಂಬಂಧಿ ಪರಿಹಾರಗಳ ಬಗ್ಗೆ ಚರ್ಚಿಸಲು ಈ ಸಚಿವರ ಗುಂಪಿನ ಸಭೆ ನಡೆದಿತ್ತು.

ಎನ್‌ಆರ್‌ಐ ಮದುವೆಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಏನೇನು ಮಾಡಬೇಕು ಎಂಬುದನ್ನು ನಿರ್ಧರಿಸಲು ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸಚಿವರ ಗುಂಪಿನಲ್ಲಿ ಕೈಗೊಂಡ ನಿರ್ಧಾರಗಳನ್ನು ಜಾರಿಗೆ ತರಲು ಬೇಕಾದ ಕಾನೂನು ತಿದ್ದುಪಡಿಗಳ ಕರಡು ಸಿದ್ಧಪಡಿಸುವಂತೆ ಸಂಬಂಧಪಟ್ಟ ಸಚಿವಾಲಯಗಳಿಗೆ ಸೂಚಿಸಲಾಗಿದೆ. ಮದುವೆ ನೋಂದಣಿ ಗಡುವನ್ನು ಕಡ್ಡಾಯಗೊಳಿಸಬೇಕಿದ್ದರೆ ಅಪರಾಧ ಪ್ರಕ್ರಿಯಾ ಸಂಹಿತೆ, ವಿವಾಹ ಕಾಯ್ದೆ ಮತ್ತು ಪಾಸ್‌ಪೋರ್ಟ್‌ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ.

ಈಗ, ಭಾರತದಲ್ಲಿ ಮದುವೆ ನೋಂದಣಿಗೆ ಯಾವುದೇ ಗಡುವು ಇಲ್ಲ. ಆದರೆ, ಮದುವೆಯಾಗಿ 30 ದಿನಗಳೊಳಗೆ ನೋಂದಣಿ ಮಾಡಿಸಬೇಕು ಎಂದು ಕಾನೂನು ಆಯೋಗದ ವರದಿ ಶಿಫಾರಸು ಮಾಡಿತ್ತು. 30 ದಿನಗಳೊಳಗೆ ವಿವಾಹ ನೋಂದಣಿ ಆಗದಿದ್ದರೆ ದಿನಕ್ಕೆ ₹5ರಂತೆ ದಂಡ ವಿಧಿಸಬೇಕು ಎಂದೂ ವರದಿ ಹೇಳಿತ್ತು.

ಎನ್‌ಆರ್‌ಐಗಳ ವೈವಾಹಿಕ ವಿವಾದಗಳನ್ನು ಪರಿಹರಿಸುವುದಕ್ಕಾಗಿ ಡಬ್ಲ್ಯುಸಿಡಿ, ಏಕೀಕೃತ ನೋಡಲ್‌ ಸಂಸ್ಥೆಯೊಂದನ್ನು (ಐಎನ್ಎ) ಆರಂಭಿಸಿತ್ತು. ವಿದೇಶಾಂಗ ವ್ಯವಹಾರ, ಗೃಹ ವ್ಯವಹಾರ ಮತ್ತು ಕಾನೂನು ಸಚಿವಾಲಯದ ಪ್ರತಿನಿಧಿಗಳು ಇದರಲ್ಲಿ ಸದಸ್ಯರಾಗಿದ್ದರು.

ರಾಷ್ಟ್ರೀಯ ಮಹಿಳಾ ಆಯೋಗದ ಶಿಫಾರಸುಗಳು ಮತ್ತು ಐಎನ್‌ಎ ನಿರ್ಧಾರಗಳ ಪ್ರಕಾರ, ಆರೋಪಿಗಳ ವಿರುದ್ಧ ‘ಲುಕ್‌ಔಟ್‌’ ಸುತ್ತೋಲೆ ಹೊರಡಿಸಲು, ಆರೋಪಿಗಳು ಭಾರತಕ್ಕೆ ಬರುವುದು ಮತ್ತು ಇಲ್ಲಿಂದ ಹೋಗುವುದರ ಮೇಲೆ ನಿಗಾ ಇರಿಸಲು ಅವಕಾಶ ಇದೆ. ಅವರು ಭಾರತದಿಂದ ಹೋಗುವುದನ್ನು ತಡೆಯುವುದಕ್ಕೂ ಸಾಧ್ಯ ಇದೆ.

**

ಕೈಕೊಟ್ಟರೆ ಆಸ್ತಿ ‘ಒತ್ತೆ’ ಪ್ರಸ್ತಾವ

ಎನ್‌ಆರ್‌ಐಗಳು ಹೆಂಡತಿಯನ್ನು ಕೈಬಿಟ್ಟು ಪರಾರಿಯಾದರೆ ಅವರ ಆಸ್ತಿಯನ್ನು ‘ಒತ್ತೆ’ ಇರಿಸಿಕೊಳ್ಳುವುದಕ್ಕೆ ಅವಕಾಶ ಕೊಡುವ ‘ಭರವಸೆ ಪತ್ರ’ಕ್ಕೆ ಸಹಿ ಹಾಕಿಸಿಕೊಳ್ಳುವ ಪ್ರಸ್ತಾವದ ಬಗ್ಗೆ ಚರ್ಚೆ ಆಗಿದೆ.

ಆಸ್ತಿ ವ್ಯವಹಾರದಲ್ಲಿ ಇಂತಹ ಭರವಸೆ ಪತ್ರವನ್ನು ಬಳಸುವ ಪರಿಪಾಠ ಇದೆ. ಇದು ಕಾನೂನುಸಮ್ಮತವೂ ಆಗಿದೆ. ಇಬ್ಬರ ನಡುವೆ ವ್ಯವಹಾರವೊಂದು ನಡೆಯುವ ಸಂದರ್ಭದಲ್ಲಿ ಆಸ್ತಿಯನ್ನು ಮೂರನೆಯವರ ವಶಕ್ಕೆ ಕೊಡಲಾಗುತ್ತದೆ. ವಹಿವಾಟು ಅಂತಿಮಗೊಂಡ ಬಳಿಕ ಯಾರಿಗೆ ಸೇರಬೇಕೋ ಅವರಿಗೆ ಆಸ್ತಿ ಹಸ್ತಾಂತರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.