ADVERTISEMENT

ಎನ್ಆರ್ ಎಚ್ಎಂ ಹಗರಣ: ಉತ್ತರ ಪ್ರದೇಶದಲ್ಲಿ ಸಿಬಿಐ ದಾಳಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 6:05 IST
Last Updated 4 ಜನವರಿ 2012, 6:05 IST
ಎನ್ಆರ್ ಎಚ್ಎಂ ಹಗರಣ: ಉತ್ತರ ಪ್ರದೇಶದಲ್ಲಿ ಸಿಬಿಐ ದಾಳಿ
ಎನ್ಆರ್ ಎಚ್ಎಂ ಹಗರಣ: ಉತ್ತರ ಪ್ರದೇಶದಲ್ಲಿ ಸಿಬಿಐ ದಾಳಿ   

ಲಖನೌ, (ಐಎಎನ್ಎಸ್): ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ (ಎನ್ ಆರ್ ಎಚ್ ಎಂ) ಅನುಷ್ಠಾನದಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಈ ಸಂಬಂಧ ಉತ್ತರ ಪ್ರದೇಶದ ಮಾಜಿ ಸಚಿವ, ಬಹುಜನ ಸಮಾಜ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಾಬು ಸಿಂಗ್ ಖುಶ್ವಾ ಅವರ ಮತ್ತು ಅವರ ಸಮೀಪವರ್ತಿಗಳ ಮನೆ, ಕಚೇರಿಗಳು ಸೇರಿದಂತೆ ಉತ್ತರ ಪ್ರದೇಶದ ಒಟ್ಟು 55 ಸ್ಥಳಗಳ ಮೇಲೆ ಸಿಬಿಐ ಬುಧವಾರ ದಾಳಿ ನಡೆಸಿ ಮಾಹಿತಿ ಕಲೆ ಹಾಕಿದೆ.

ಕಳೆದ ನವೆಂಬರ್ ತಿಂಗಳಲ್ಲಿ ಬಿಎಸ್ ಪಿಯಿಂದ ಉಚ್ಚಾಟನೆಗೊಳಗಾಗಿದ್ದ, ಮಾಯಾವತಿ ಸರ್ಕಾರದಲ್ಲಿ ಈ ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಬಾಬು ಸಿಂಗ್ ಖುಶ್ವಾ ಅವರು ನಿನ್ನೆ ಮಂಗಳವಾರವಷ್ಟೇ ಭಾರತೀಯ ಜನತಾ ಪಕ್ಷವನ್ನು ಸೇರಿದ್ದರು. ಇಂದು ಬುಧವಾರ ಅವರ ಮನೆ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

ಕುಶ್ವಾ ಮತ್ತು ಅವರ ಸಹವರ್ತಿಗಳ ಮನೆ ಮತ್ತು ಮಾರಾಟ ಮಳಿಗೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಕುಶ್ವಾ ಅವರ ಹತ್ತಿರದವರೆನ್ನಲಾದ ಶಾಸಕ ರಾಮಚಂದ್ರ ಪ್ರಧಾನ ಅವರ ಮನೆ ಮತ್ತು ಮಾರಾಟ ಮಳಿಗೆಗಳ ಮೇಲೆಯೂ ದಾಳಿ ನಡೆದಿದೆ. ಸಿಬಿಐನ  ಪ್ರತ್ಯೇಕ ತಂಡಗಳು ಲಖನೌ, ಕಾನ್ಪುರ್, ಮೊರಾದಾಬಾದ್, ಗಾಜಿಯಾಬಾದ ಮತ್ತು ಆಗ್ರಾ ಸೇರಿದಂತೆ 12 ಜಿಲ್ಲೆಗಳಲ್ಲಿನ ಉಭಯತರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ADVERTISEMENT

ಕುಶ್ವಾ ಅವರು ಮುಂಬೈನಲ್ಲಿ ಹೊಂದಿರುವರೆನ್ನಲಾದ ಬೇನಾಮಿ ಆಸ್ತಿಯ ಕುರಿತೂ ಸಿಬಿಐ ತನಿಖೆ ನಡೆಸುತ್ತಿದೆ ಎನ್ನಲಾಗಿದೆ. ಎನ್ ಆರ್ ಎಚ್ ಎಂ ಯೋಜನೆಯ ಅನುಷ್ಠಾನದಲ್ಲಿ ಅಕ್ರಮ ನಡೆದ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದಂತೆಯೇ ಅವರನ್ನು ಕಳೆದ ವರ್ಷ ಏಪ್ರಲ್ ತಿಂಗಳಲ್ಲಿ ಸಚಿವ ಸ್ಥಾನದಿಂದ ವಜಾ ಮಾಡಲಾಗಿತ್ತು. ಮುಂದೆ ನವೆಂಬರ್ ತಿಂಗಳಲ್ಲಿ ಪಕ್ಷದಿಂದಲೇ ಉಚ್ಚಾಟನೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.