ADVERTISEMENT

ಎನ್ರಾನ್‌ –ದಾಭೋಲ್‌ ವಿದ್ಯುತ್‌ ಪ್ರಕರಣಕ್ಕೆ ಮುಕ್ತಿ!

ಭ್ರಷ್ಟಾಚಾರ ಆರೋಪ: 22 ವರ್ಷದ ಹಳೆಯ ಪ್ರಕರಣ ಅಂತ್ಯಗೊಳಿಸಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 19:31 IST
Last Updated 11 ಏಪ್ರಿಲ್ 2019, 19:31 IST

ನವದೆಹಲಿ: ಸುಮಾರು 22 ವರ್ಷ ಹಳೆಯದಾದ ಎನ್ರಾನ್‌–ದಾಭೋಲ್‌ ವಿದ್ಯುತ್‌ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಗುರುವಾರ ಅಂತ್ಯಗೊಳಿಸಿದೆ.

ಕೆಲವು ಕಾರ್ಪೋರೇಟ್‌ ಸಂಸ್ಥೆಗಳು ಸೇರಿದಂತೆ ರಾಜಕಾರಣಿಗಳು, ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ವಿಪರೀತ ವಿಳಂಬವಾದ ಕಾರಣ ನ್ಯಾಯಾಲಯ ಈ ಕ್ರಮಕೈಗೊಂಡಿದೆ.

ಈ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಮತ್ತು ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಮತ್ತು ಸಂಜೀವ್‌ ಖನ್ನಾ ಅವರನ್ನೊಳಗೊಂಡ ಪೀಠವು ಒಪ್ಪಿಕೊಂಡಿದೆ.

ADVERTISEMENT

ಅಮೆರಿಕದ ಎನ್ರಾನ್‌ ಕಂಪನಿ ಮತ್ತು ದಾಭೋಲ್‌ ವಿದ್ಯುತ್‌ ಕಾರ್ಪೋರೇಷನ್‌ 1996ರಲ್ಲಿ ಮಹಾರಾಷ್ಟ್ರದಲ್ಲಿ 3 ಶತಕೋಟಿ ಡಾಲರ್‌ (₹20,700 ಕೋಟಿ) ವೆಚ್ಚದಲ್ಲಿ ಬೃಹತ್‌ ವಿದ್ಯುತ್‌ ಯೋಜನೆಯನ್ನು ಕೈಗೊಂಡಿದ್ದವು. ಇದಕ್ಕಾಗಿ ಮಹಾರಾಷ್ಟ್ರ ರಾಜ್ಯ ವಿದ್ಯುತ್‌ ಮಂಡಳಿ ಜತೆ ವಿದ್ಯುತ್‌ ಖರೀದಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ವಿದ್ಯುತ್‌ ಖರೀದಿ ಒಪ್ಪಂದ ಪ್ರಶ್ನಿಸಿ ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್‌ (ಸಿಐಟಿಯು) ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಬಳಿಕ, ಹೈಕೋರ್ಟ್‌ ತೀರ್ಪು ಪ್ರಶ್ನಿಸಿ 1997ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಅಂಗೀಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.