ನವದೆಹಲಿ (ಪಿಟಿಐ): ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಕೇಂದ್ರವನ್ನು (ಎನ್ ಸಿ ಟಿಸಿ) ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವುದಕ್ಕೆ ಕಾಂಗ್ರೆಸ್ ಆಳ್ವಿಕೆಯಲ್ಲಿರುವ ಕರ್ನಾಟಕ ಆಕ್ಷೇಪ ವ್ಯಕ್ತ ಪಡಿಸಿದ್ದು, ಎನ್ ಸಿಟಿಸಿಗೆ 'ನಿರಂಕುಶ ಅಧಿಕಾರಗಳನ್ನು' ನೀಡಬಾರದು ಎಂದು ಆಗ್ರಹಿಸಿದೆ.
ಗೃಹ ಸಚಿವಾಲಯವು ಇಲ್ಲಿ ಸಂಘಟಿಸಿದ್ದ ಆಂತರಿಕ ಭದ್ರತೆ ಕುರಿತ ಮುಖ್ಯಮಂತ್ರಿಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಸ್ಥಾಪನೆಗೆ ಮುನ್ನ ರಾಜ್ಯಗಳ ಕಾರ್ಯವ್ಯಾಪ್ತಿಯಲ್ಲಿ ಅತಿಕ್ರಮಣ ಮಾಡಲು ಅವಕಾಶವಾಗುವಂತಹ ನಿರಂಕುಶ ಅಧಿಕಾರಗಳನ್ನು ಅದಕ್ಕೆ ನೀಡದಂತೆ ಕೆಲವು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ನುಡಿದರು.
ಕೇಂದ್ರ ಸರ್ಕಾರದ ಯೋಜನೆಯಂತೆ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಕೇಂದ್ರವು ಬಹು ಆಯಾಮದ ಗೂಢಚರ್ಯೆ ಮಾಹಿತಿ ಸಂಗ್ರಹ ಮತ್ತು ಕಾರ್ಯ ಯೋಜನಾ ಸಂಸ್ಥೆಯನ್ನು ಹೊಂದಿರುತ್ತದೆ. ಹಾಲಿ ಗೂಢಚರ್ಯೆ ಸಂಸ್ಥೆಯ ಜಾಲವು ಭಯೋತ್ಪಾದನೆ ಚಟುವಟಿಕೆಗಳನ್ನು ನಿಗ್ರಹಿಸುವ ಯತ್ನದಲ್ಲಿ ಪರಿಣಾಮಕಾರಿಯಾಗಿಲ್ಲದೇ ಇರುವುದು ಕೇಂದ್ರದ ಹೊಸ ಚಿಂತನೆಗೆ ಕಾರಣವಾಗಿದೆ.
ಭಯೋತ್ಪಾದನಾ ಚಟುವಟಿಕೆ ನಿಗ್ರಹ ಯೋಜನೆ ರೂಪಿಸುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಗೂಢಚರ್ಯೆ ವಿನಿಮಯದ ಮಹತ್ವವನ್ನು ಕರ್ನಾಟಕ ತತ್ವಶಃ ಮಾನ್ಯ ಮಾಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ನಕ್ಸಲ್ ಚಟುವಟಿಕೆಗಳು ರಾಜ್ಯದಲ್ಲೂ ವಿಸ್ತರಣೆಗೊಳ್ಳುತ್ತಿವೆ. ಹೀಗಾಗಿ ಕರ್ನಾಟಕವು ಎಡಪಂಥೀಯ ಉಗ್ರವಾದ ಬಾಧಿತ ಪ್ರದೇಶವಾಗಿ ಪರಿಗಣಿತಗೊಂಡಿದೆ ಎಂದು ಹೇಳಿದ ಅವರು ನಕ್ಸಲ್ ಚಳವಳಿಯು ಖಂಡಿತವಾಗಿ ರಾಜ್ಯದ ಸುರಕ್ಷತಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದು ಎಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.