ADVERTISEMENT

ಎಫ್‌ಡಿಐಗೆ ಮಮತಾ ಓಲೈಕೆ ?

​ಪ್ರಜಾವಾಣಿ ವಾರ್ತೆ
Published 6 ಮೇ 2012, 19:30 IST
Last Updated 6 ಮೇ 2012, 19:30 IST
ಎಫ್‌ಡಿಐಗೆ ಮಮತಾ ಓಲೈಕೆ ?
ಎಫ್‌ಡಿಐಗೆ ಮಮತಾ ಓಲೈಕೆ ?   

ಕೋಲ್ಕತ್ತ (ಪಿಟಿಐ): ಆರ್ಥಿಕ ದಿಗ್ಬಂಧನಕ್ಕೆ ಗುರಿಯಾಗಿರುವ ಇರಾನ್‌ನಿಂದ ತೈಲ ಆಮದು ಪ್ರಮಾಣವನ್ನು ಇನ್ನಷ್ಟು ಕಡಿತಗೊಳಿಸುವಂತೆ ಒತ್ತಡ ಹೇರುವುದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಭಾರತ ಭೇಟಿ ಕಾರ್ಯಕ್ರಮದ ಪ್ರಮುಖ ಕಾರ್ಯಸೂಚಿಯಾಗಿದೆ.

ಮೂರು ದಿನಗಳ ಭಾರತ ಭೇಟಿಗಾಗಿ ಭಾನುವಾರ ಇಲ್ಲಿಗೆ ಆಗಮಿಸಿದ ಹಿಲರಿ, ಬಹು ಬ್ರಾಂಡ್‌ನ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ಪ್ರಮುಖ ಅಡ್ಡಿಯಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜತೆ ಚರ್ಚಿಸಿ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
 
`ದೀದಿ~ಯ ತೀವ್ರ ವಿರೋಧದ ಕಾರಣದಿಂದಾಗಿಯೇ ಚಿಲ್ಲರೆ ವಹಿವಾಟು ರಂಗದಲ್ಲಿ `ಎಫ್‌ಡಿಐ~ಗೆ ಅನುಮತಿ ನೀಡುವುದು ನೆನೆಗುದಿಗೆ ಬಿದ್ದಿದೆ. ಇದರಿಂದ ಭಾರತದಲ್ಲಿನ ಅಮೆರಿಕದ ಬಂಡವಾಳ ಹೂಡಿಕೆಗೆ ತೀವ್ರ ಅಡಚಣೆ ಒಡ್ಡಿರುವುದು ಒಬಾಮ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಪಶ್ಚಿಮ ಬಂಗಾಳದಲ್ಲಿನ ಬಂಡವಾಳ ಹೂಡಿಕೆ ಮತ್ತು ವ್ಯಾಪಾರ ಅವಕಾಶಗಳೂ ಚರ್ಚೆಗೆ ಬರುವ ಸಾಧ್ಯತೆಗಳು ಇವೆ.

ಉಭಯ ಪ್ರಭಾವಿ ಮಹಿಳೆಯರು, ಭಾರತ ಮತ್ತು ಬಾಂಗ್ಲಾ ದೇಶದ ಮಧ್ಯೆ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ತೀಸ್ತಾ ನದಿ ನೀರು ಹಂಚಿಕೆ ವಿಷಯವನ್ನೂ ಚರ್ಚಿಸಲಿದ್ದಾರೆ. ನದಿ ನೀರು ಹಂಚಿಕೆಯಲ್ಲಿ ತಮ್ಮ ರಾಜ್ಯಕ್ಕಿಂತ ಬಾಂಗ್ಲಾದೇಶ ಹೆಚ್ಚು ಪ್ರಯೋಜನ ಪಡೆಯಲಿದೆ ಎನ್ನುವ ಕಾರಣಕ್ಕೆ `ದೀದಿ~ ಈ ಒಪ್ಪಂದ ವಿರೋಧಿಸುತ್ತಿದ್ದಾರೆ.

ಚೀನಾ ಹಾಗೂ ಬಾಂಗ್ಲಾ ದೇಶ ಪ್ರವಾಸದ ಬಳಿಕ ಕೋಲ್ಕತ್ತಕ್ಕೆ ಬಂದಿಳಿದಿರುವ ಹಿಲರಿ, ಸೋಮವಾರ ಮುಖ್ಯಮಂತ್ರಿ ಮಮತಾ ಅವರನ್ನು ಭೇಟಿಯಾಗಲಿದ್ದಾರೆ. ಅನಂತರ ಅವರು ದೆಹಲಿಗೆ ತೆರಳುವರು. ಈ ಮೊದಲು ಹಿಲರಿ 1997ರಲ್ಲಿ ಅಮೆರಿಕದ ಪ್ರಥಮ ಮಹಿಳೆಯಾಗಿ ಕೋಲ್ಕತ್ತ ನಗರಕ್ಕೆ ಭೇಟಿ ನೀಡಿದ್ದರು.

ಮಂಗಳವಾರ ಅವರು ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಲಿದ್ದು, ಈ ಸಂದರ್ಭದಲ್ಲಿ ಉಭಯತ್ರರು ನಾಗರಿಕ ಪರಮಾಣು ಸಹಕಾರ, ಪ್ರಾಂತೀಯ ಭದ್ರತೆ, ಇರಾನ್ ವಿಷಯಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಿದ್ದಾರೆ. ಎಫ್‌ಬಿಐ ಭದ್ರತೆ: ಹಿಲರಿ ಕ್ಲಿಂಟನ್ ಹಾಗೂ ಅವರ ಜೊತೆ ಆಗಮಿಸಿರುವ 40 ಸದಸ್ಯರ ನಿಯೋಗ ತಂಗಿರುವ ನಗರದ ಹೋಟೆಲ್‌ನ ಸಂಪೂರ್ಣ ಭದ್ರತೆಯ ಹೊಣೆಯನ್ನು ಎಫ್‌ಬಿಐನ ನುರಿತ ಸಿಬ್ಬಂದಿ ಹೊತ್ತಿದ್ದಾರೆ. ಹೋಟೆಲ್‌ನ ಸುಮಾರು 100 ಕೋಣೆಗಳನ್ನು ಅಮೆರಿಕ ನಿಯೋಗ ಕಾಯ್ದಿರಿಸಿದೆ. ಕ್ಲಿಂಟನ್ ಭೇಟಿ ಸಂದರ್ಭದಲ್ಲಿನ ಭದ್ರತೆ ಪರಿಶೀಲಿಸಲು ಎಫ್‌ಬಿಐ ತಂಡ ಒಂದು ವಾರದ ಹಿಂದೆಯೇ ಕೋಲ್ಕತ್ತಕ್ಕೆ ಆಗಮಿಸಿತ್ತು.

ಪರಮಾಣು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅಂತರ ರಾಷ್ಟ್ರೀಯ ಸಮುದಾಯ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಲು ಇರಾನ್‌ನ ಮೇಲೆ ಮತ್ತಷ್ಟು ಒತ್ತಡ ಹೇರುವುದು ಅಮೆರಿಕದ ಉದ್ದೇಶ. ಹೀಗಾಗಿ ಇರಾನ್‌ನಿಂದ ತೈಲ ಆಮದು ಪ್ರಮಾಣ ಕಡಿತಗೊಳಿಸುವಂತೆ ಭಾರತ ಸೇರಿದಂತೆ ಇತರ ರಾಷ್ಟ್ರಗಳಿಗೆ ಅದು ಈ ಮೊದಲೇ ಮನವಿ ಮಾಡಿತ್ತು.

ಭಾರತವು ಸದ್ಯಕ್ಕೆ ಶೇ 80ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಲ್ಲಿ ಶೇ 12ರಷ್ಟು ತೈಲಕ್ಕೆ ಇರಾನ್ ದೇಶವನ್ನು ನೆಚ್ಚಿಕೊಂಡಿದೆ. ದೇಶೀಯ ಬೇಡಿಕೆ ಪೂರೈಕೆಗಾಗಿ ಇರಾನ್‌ನಿಂದ ತೈಲ ಆಮದು ಮುಂದುವರಿಸದೇ ಬೇರೆ ದಾರಿ ಇಲ್ಲ ಎನ್ನುವುದು ಭಾರತದ ವಾದ.

ಇರಾನ್‌ನ ತೈಲ ಆಮದು ಪ್ರಮಾಣ  ಕಡಿತಗೊಳಿಸುವುದಾಗಿ ಭಾರತ ಬಹಿರಂಗವಾಗಿ ಹೇಳಿಲ್ಲ. ಆದರೆ, ದೇಶದ ಪ್ರಮುಖ ತೈಲ ಆಮದು ಕಂಪನಿಗಳು ಇರಾನ್‌ನಿಂದ ತೈಲ ಖರೀದಿಸುವ ಪ್ರಮಾಣವನ್ನು ಶೇ 15ರಿಂದ 20ರಷ್ಟು ಕುಗ್ಗಿಸಿವೆ. 2009-10ರಲ್ಲಿ ಭಾರತ ಇರಾನ್‌ನಿಂದ 2.12 ಕೋಟಿ ಟನ್‌ಗಳಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿತ್ತು. 2010-11ರಲ್ಲಿ ಅದು 1.85 ಕೋಟಿ ಟನ್‌ಗೆ ಇಳಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.