ADVERTISEMENT

ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ನಿಷೇಧಕ್ಕೆ ಆಯೋಗದ ಒಲವು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST

ನವದೆಹಲಿ: ಲೋಕಸಭೆ ಅಥವಾ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದನ್ನು ನಿಷೇಧಿಸುವುದಕ್ಕೆ ಬೆಂಬಲವಿದೆ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

‘ಯಾವುದೇ ಅಭ್ಯರ್ಥಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ, ಎರಡರಲ್ಲೂ ಗೆದ್ದಿರುವ ಸಾಕಷ್ಟು ನಿದರ್ಶನಗಳಿವೆ. ಅಂತಹ ಸಂದರ್ಭದಲ್ಲಿ ಅಭ್ಯರ್ಥಿ ಎರಡರಲ್ಲಿ ಒಂದು ಕ್ಷೇತ್ರದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಹೀಗೆ ತೆರವಾದ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವುದಕ್ಕೆ ಭಾರಿ ವೆಚ್ಚವಾಗುತ್ತದೆ. ಆದ್ದರಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕು’ ಎಂದು ದೆಹಲಿಯ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಪೀಠದ ಎದುರು ಚುನಾವಣಾ ಆಯೋಗವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ‘2004ರಲ್ಲೇ ಇಂತಹದ್ದೊಂದು ಪ್ರಸ್ತಾವವನ್ನು ನಾವು ಸರ್ಕಾರದ ಮುಂದಿಟ್ಟಿದ್ದೆವು. ಈಗಲೂ ನಾವು ನಿಷೇಧವನ್ನು ಬೆಂಬಲಿಸುತ್ತೇವೆ. ನಿಷೇಧ ಸಾಧ್ಯವಿಲ್ಲದಿದ್ದರೆ, ಅಭ್ಯರ್ಥಿ ಸ್ಪರ್ಧಿಸುವ ಎರಡನೇ ವಿಧಾನಸಭಾ ಕ್ಷೇತ್ರಕ್ಕೆ ₹ 5 ಲಕ್ಷ ಮತ್ತು ಎರಡನೇ ಲೋಕಸಭಾ ಕ್ಷೇತ್ರಕ್ಕೆ ₹10 ಲಕ್ಷ ಠೇವಣಿ ಸಂಗ್ರಹಿಸಬೇಕು. ಆಗ ಉಪಚುನಾವಣೆಯ ವೆಚ್ಚ ಕಡಿಮೆ ಯಾಗುತ್ತದೆ’ ಎಂದು ಆಯೋಗ ತನ್ನ ಅಭಿಪ್ರಾಯ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.