ADVERTISEMENT

ಎಲೆಕ್ಟ್ರಾನಿಕ್‌ ಮತ ಯಂತ್ರಗಳ ಜತೆಗೆ ವಿವಿಪ್ಯಾಟ್‌ ಬಳಕೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ

ಏಜೆನ್ಸೀಸ್
Published 19 ಏಪ್ರಿಲ್ 2017, 10:40 IST
Last Updated 19 ಏಪ್ರಿಲ್ 2017, 10:40 IST
ಎಲೆಕ್ಟ್ರಾನಿಕ್‌ ಮತ ಯಂತ್ರಗಳ ಜತೆಗೆ ವಿವಿಪ್ಯಾಟ್‌ ಬಳಕೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ
ಎಲೆಕ್ಟ್ರಾನಿಕ್‌ ಮತ ಯಂತ್ರಗಳ ಜತೆಗೆ ವಿವಿಪ್ಯಾಟ್‌ ಬಳಕೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ   

ನವದೆಹಲಿ: ಮತದಾನ ಪ್ರಕ್ರಿಯೆಯಲ್ಲಿ ಎಲೆಕ್ಟ್ರಾನಿಕ್‌ ಮತ ಯಂತ್ರ(ಇವಿಎಂ)ಗಳ ಜತೆಗೆ ಮತ ಪರಿಶೀಲನಾ ವ್ಯವಸ್ಥೆಯನ್ನು ಅಳವಡಿಸುವ ಚುನಾವಣಾ ಆಯೋಗದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.

ಎಲೆಕ್ಟ್ರಾನಿಕ್‌ ಮತ ಯಂತ್ರಗಳಲ್ಲಿ ಮಾರ್ಪಾಡು ಮಾಡಿರುವ ಕುರಿತು ವಿರೋಧ ಪಕ್ಷಗಳಿಂದ ಆರೋಪ ಕೇಳಿ ಬರುವ ಜತೆಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು. ಇವಿಎಂಗಳ ಜತೆಗೆ ಮತ ತಾಳೆ ಮಾಡಿಕೊಳ್ಳುವ ವಿವಿಪ್ಯಾಟ್‌ (VVPAT–voter verifiable paper audit trail) ಬಳಸುವಂತೆ ಒತ್ತಡ ಹೇರಲಾಗಿತ್ತು.

ಈ ಸಂಬಂಧ ಚುನಾವಣಾ ಆಯೋಗ ನೀಡಿದ್ದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಮುಂಬರುವ  ಚುನಾವಣೆಯಲ್ಲಿ ಇವಿಎಂ ಜತೆಗೆ ವಿವಿಪ್ಯಾಟ್‌ ಬಳಕೆಯಾಗಲಿದೆ.

ADVERTISEMENT

ದೇಶದ ಎಲ್ಲ ಮತ ಕೇಂದ್ರಗಳಿಗೆ 16 ಲಕ್ಷ ವಿವಿಪ್ಯಾಟ್‌ ಯಂತ್ರಗಳ ಅವಶ್ಯಕತೆ ಇದ್ದು, ₹3,174 ಕೋಟಿ ವ್ಯಯವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿತ್ತು. ಮತ ಯಂತ್ರಗಳ ಖರೀದಿಗಾಗಿ 2014ರಿಂದ ಸಚಿವ ಸಂಪುಟ ₹1,009 ಹಾಗೂ ₹9,200 ಕೋಟಿ ಬಿಡುಗಡೆ ಮಾಡಿದೆ.

30 ತಿಂಗಳು... 

ಎಲ್ಲ ಮತ ಕೇಂದ್ರಗಳಲ್ಲಿ ವಿವಿಪ್ಯಾಟ್‌ ಯಂತ್ರಗಳನ್ನು ಬಳಸಲು ಅಗತ್ಯವಿರುವ ಸಮಯದ ಬಗ್ಗೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಕೇಳಿತ್ತು. 16 ಲಕ್ಷ ವಿವಿಪ್ಯಾಟ್‌ ನಿರ್ಮಿಸಲು ಇಸಿಐಎಲ್‌ ಮತ್ತು ಬಿಇಎಲ್‌  ಸಂಸ್ಥೆಗಳಿಗೆ 30 ತಿಂಗಳ ಅಗತ್ಯವಿದೆ ಎಂದು ಉತ್ತರಿಸಿತ್ತು.

ಮತದಾನದಲ್ಲಿ ಪಾರದರ್ಶಕತೆ ತರಲು ಕಾಗದ ಮತ ಪತ್ರಗಳ ಬಳಕೆ ತರುವಂತೆ 16 ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.