ADVERTISEMENT

‘ಎಲ್‌ಒಯು’ ನೀಡಿಕೆಗೆ ಆರ್‌ಬಿಐ ನಿರ್ಬಂಧ

ಪಿಟಿಐ
Published 14 ಮಾರ್ಚ್ 2018, 4:22 IST
Last Updated 14 ಮಾರ್ಚ್ 2018, 4:22 IST
‘ಎಲ್‌ಒಯು’ ನೀಡಿಕೆಗೆ ಆರ್‌ಬಿಐ ನಿರ್ಬಂಧ
‘ಎಲ್‌ಒಯು’ ನೀಡಿಕೆಗೆ ಆರ್‌ಬಿಐ ನಿರ್ಬಂಧ   

ಮುಂಬೈ: ಆಮದು ವಹಿವಾಟಿಗೆ ನೀಡಲಾಗುವ ಸಾಲಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ವಿತರಿಸುತ್ತಿದ್ದ ಸಾಲ ಮರುಪಾವತಿ ಖಾತರಿ ಪತ್ರಗಳಿಗೆ (ಎಲ್‌ಒಯು) ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಷೇಧ ವಿಧಿಸಿದೆ.

‘ಎಲ್‌ಒಯು’ಗಳ ದುರ್ಬಳಕೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ತಕ್ಷಣದಿಂದಲೇ ಇದು ಜಾರಿಗೆ ಬಂದಿದೆ. ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್‌ ಚೋಕ್ಸಿ, ನಕಲಿ ಎಲ್‌ಒಯು ಬಳಸಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹ 13 ಸಾವಿರ ಕೋಟಿಗಳಷ್ಟು ವಂಚನೆ ಎಸಗಿದ್ದಾರೆ. ದೇಶದ ಅತಿದೊಡ್ಡ ಬ್ಯಾಂಕ್‌ ವಂಚನೆ ಪ್ರಕರಣ ಇದಾಗಿದೆ.

ಆಮದು ವಹಿವಾಟುದಾರರು ತಮ್ಮ ಸಾಗರೋತ್ತರ ಖರೀದಿಗಾಗಿ ಬಳಸುವ ‘ಲೆಟರ್‌ ಆಫ್ ಕಂಫರ್ಟ್‌’ ನೀಡಿಕೆ ಮೇಲೆಯೂ ನಿಷೇಧ ವಿಧಿಸಲಾಗಿದೆ.

ADVERTISEMENT

ನೀರವ್‌ ಮತ್ತು ಚೋಕ್ಸಿ ಅವರಿಗೆ ಸೇರಿದ ಸಂಸ್ಥೆಗಳು, ‘ಪಿಎನ್‌ಬಿ’ಯ ಮುಂಬೈನ ಬ್ರ್ಯಾಡಿ ಹೌಸ್‌ ಶಾಖೆಯ ಸಿಬ್ಬಂದಿ ನೆರವಿನಿಂದ  ನಕಲಿ ಎಲ್‌ಒಯು ಪಡೆದು ವಂಚನೆ ಎಸಗಿವೆ. ವಿದೇಶಗಳಲ್ಲಿ ಇರುವ ಭಾರತದ ಬ್ಯಾಂಕ್‌ ಶಾಖೆಗಳಿಂದ ಸಾಲ ಪಡೆಯಲು ಇವುಗಳನ್ನು ಬಳಸಿಕೊಳ್ಳಲಾಗಿತ್ತು.

‘2011ರಲ್ಲಿಯೇ ಈ ವಂಚನೆಗೆ ಚಾಲನೆ ನೀಡಲಾಗಿತ್ತು. ನೀರವ್‌, 74 ತಿಂಗಳಲ್ಲಿ ಇಂತಹ 1,212 ನಕಲಿ ಎಲ್‌ಒಯುಗಳನ್ನು ಪಡೆದು ವಂಚಿಸಿದ್ದಾರೆ’ ಎಂದು ಸಚಿವ ಅರುಣ್‌ ಜೇಟ್ಲಿ ರಾಜ್ಯಸಭೆಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.