ADVERTISEMENT

ಎಲ್ಲರೂ ಸಹಕರಿಸಿದರೆ ಆ.15ರೊಳಗೆ ಮಸೂದೆ ಅಂಗೀಕಾರ: ಮೊಯಿಲಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 19:50 IST
Last Updated 12 ಏಪ್ರಿಲ್ 2011, 19:50 IST

ನವದೆಹಲಿ (ಐಎಎನ್‌ಎಸ್): ಎಲ್ಲರ ಸಹಕಾರವಿದ್ದರೆ ಸರ್ಕಾರವು ಲೋಕಪಾಲ ಮಸೂದೆಯನ್ನು ಆಗಸ್ಟ್ 15ರೊಳಗೆ ಸಂಸತ್‌ನಲ್ಲಿ ಅಂಗೀರಿಸಲು ಬದ್ಧವಾಗಿದೆ ಎಂದು ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಮಂಗಳವಾರ ಹೇಳಿದರು.

‘ಈ ಮಸೂದೆಯನ್ನು ಮಂಡಿಸಲು ಮತ್ತು ಸಂಸತ್‌ನಲ್ಲಿ ಒಪ್ಪಿಗೆ ನೀಡಲು ಎಲ್ಲ ಪಕ್ಷಗಳು ಒಪ್ಪಿಕೊಂಡರೆ ಸರ್ಕಾರ ಇದನ್ನು ನಿರ್ದಿಷ್ಟ ದಿನಾಂಕದೊಳಗೆ ಖಂಡಿತವಾಗಿ ಸಾಧಿಸುತ್ತದೆ’ ಎಂದು ಅವರು ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದರು.

‘ಆಗಸ್ಟ್ 15ರೊಳಗೆ ಲೋಕಪಾಲ ಮಸೂದೆಗೆ ಅಂಗೀಕಾರ ದೊರಕದಿದ್ದರೆ ಮತ್ತೆ ನಿರಶನ ನಡೆಸುವೆ’ ಎಂದಿರುವ ಅಣ್ಣಾ ಹಜಾರೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕರಡು ಸಮಿತಿಯಲ್ಲಿ  ಸೌಹಾರ್ದ ಚರ್ಚೆ ನಡೆದು ಕರಡು ಪ್ರತಿ ಮೊದಲು ಸಿದ್ಧವಾಗಬೇಕು. ಇದಕ್ಕೆ ಸಮಿತಿಯ ಎಲ್ಲ ಸದಸ್ಯರ ಸಹಕಾರ ಬೇಕು. ಆಗ ಮಾತ್ರ ನಿಗದಿತ ದಿನದೊಳಗೆ ಈ ಮಸೂದೆಯನ್ನು ಮಂಡಿಸಲು ಮತ್ತು ಅಂಗೀಕರಿಸಲು ಸಾಧ್ಯ’ ಎಂದರು.

‘ಮಸೂದೆ ಮಂಡಿಸಿದ ಮೇಲೆ ಕೆಲವು ಪಕ್ಷಗಳು ಅಥವಾ ಸದಸ್ಯರು ಅದನ್ನು ಸಂಸತ್‌ನ ಸ್ಥಾಯಿ ಸಮಿತಿಯ ಪರಾಮರ್ಶೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದರೆ ಆಗ ಮಸೂದೆಯನ್ನು ಅಂಗೀಕರಿಸುವ ಕಾರ್ಯವು ಸ್ಥಾಯಿ ಸಮಿತಿ ತೆಗೆದುಕೊಳ್ಳುವ ಕಾಲಾವಕಾಶವನ್ನು ಅವಲಂಬಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಅಸಹಾಯಕವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.