ADVERTISEMENT

ಎಲ್‌ಟಿಟಿಇ ನಿಷೇಧ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ಚೆನ್ನೈ (ಪಿಟಿಐ): ದೇಶದಲ್ಲಿ ಎಲ್‌ಟಿಟಿಇ ನಿಷೇಧ ಕುರಿತಾದ ಕೇಂದ್ರ ಸರ್ಕಾರ ಅಧಿಸೂಚನೆ ವಿರುದ್ಧ ಎಂಡಿಎಂಕೆ ನಾಯಕ ವೈಕೋ ಮತ್ತು ವಕೀಲ ಪಿ. ಪುಗಳೇಂದಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ತೀರ್ಪನ್ನು ಮದ್ರಾಸ್ ಹೈಕೋರ್ಟ್ ಕಾಯ್ದಿರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳ ಪರ ಮಂಡಿಸಿದ ವಾದ- ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಎಲಿಪ್ ಧರ್ಮರಾವ್ ಮತ್ತು ಎಂ. ವೇಣುಗೋಪಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ತೀರ್ಪನ್ನು ಕಾಯ್ದಿರಿಸಿದೆ.

1992ರಲ್ಲಿ ಕೇಂದ್ರ ಸರ್ಕಾರ ಎಲ್‌ಟಿಟಿಇಯನ್ನು ನಿಷೇಧಿಸಿತ್ತು. ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಆ ನಿಷೇಧವನ್ನು ವಿಸ್ತರಿಸುತ್ತಿದೆ. ಕೇಂದ್ರದ ಈ ಕ್ರಮದಿಂದ ಅಮಾಯಕ ಜನರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತದೆ. ಆದ್ದರಿಂದ ಎಲ್‌ಟಿಟಿಇ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು ಎಂದು ವೈಕೋ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ. ರವೀಂದ್ರನ್, `ಕೇಂದ್ರದ ನಿಲುವು ಪ್ರಶ್ನಿಸಿರುವ ವೈಕೋ ಆ ಸಂಘಟನೆಗೆ ಸೇರಿಲ್ಲದ ಕಾರಣ; ಎಲ್‌ಟಿಟಿಇ ನಿಷೇಧ ತೆರವುಗೊಳಿಸಿ ಎಂದು ಕೇಳುವ ಹಕ್ಕು ಅವರಿಗಿಲ್ಲ. ಹಾಗಾಗಿ ಅವರ ಅರ್ಜಿ ವಜಾಗೊಳಿಸಬೇಕು~ ಎಂದು ಕೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.