ADVERTISEMENT

ಎವರೆಸ್ಟ್‌ನಲ್ಲಿ ನೂರಾರು ಟನ್‌ ಕಸ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 17:42 IST
Last Updated 17 ಜೂನ್ 2018, 17:42 IST
ನಾಲ್ಕನೇ ಹಂತದ ಶಿಬಿರದಲ್ಲಿ ರಾಶಿಯಾಗಿರುವ ತ್ಯಾಜ್ಯ
ನಾಲ್ಕನೇ ಹಂತದ ಶಿಬಿರದಲ್ಲಿ ರಾಶಿಯಾಗಿರುವ ತ್ಯಾಜ್ಯ   

ವಿಶ್ವದ ಅತಿ ಎತ್ತರದ ಪರ್ವತ ಎಂಬ ಖ್ಯಾತಿಯ ಎವರೆಸ್ಟ್‌, ಕಸದ ವಿಚಾರದಲ್ಲಿ ಈಗ ಕುಖ್ಯಾತಿಗೂ ಪಾತ್ರವಾಗಿದೆ. ಎವರೆಸ್ಟ್ ಏರಲು ಪರ್ವತಾರೋಹಿಗಳು ಭಾರಿ ಉತ್ಸಾಹ ತೋರುತ್ತಾರೆ. ಆದರೆ ಪರ್ವತಾರೋಹಣದಲ್ಲಿ ತಾವು ಸೃಷ್ಟಿಸಿದ ತ್ಯಾಜ್ಯವನ್ನು ವಾಪಸ್ ತರಲು ಅಷ್ಟೇ ನಿರ್ಲಕ್ಷ್ಯ ತೋರುತ್ತಾರೆ. ಹೀಗಾಗಿಯೇ ಎವರೆಸ್ಟ್‌ನಲ್ಲಿ ನೂರಾರು ಟನ್‌ನಷ್ಟು ಕಸ ರಾಶಿಯಾಗಿದೆ

ಏನೆಲ್ಲಾ ಕಸ
ಹರಿದ/ಹಾಳಾದ ಟೆಂಟ್‌ಗಳು
ಆಮ್ಲಜನಕದ ಖಾಲಿ ಸಿಲಿಂಡರ್‌ಗಳು
ಬಟ್ಟೆ–ಷೂಗಳು
ತಿಂಡಿ–ತಿನಿಸಿನ ರ‍್ಯಾಪರ್‌ಗಳು
ಮಾನವ ತ್ಯಾಜ್ಯ

ಕಸ ರಾಶಿಯಾಗಲು ಕಾರಣ
ಕಸವನ್ನು ಕಡ್ಡಾಯವಾಗಿ ತರಲೇಬೇಕು ಎಂಬ ನಿಯಮ ಜಾರಿಯಲ್ಲಿಲ್ಲ.
ಕಸವನ್ನು ವಾಪಸ್ ತರಲು ಬಹುತೇಕ ಪರ್ವತಾರೋಹಿಗಳು ನಿರಾಕರಿಸುತ್ತಾರೆ.
ಎವರೆಸ್ಟ್ ಹತ್ತುವಾಗ ಮತ್ತು ಇಳಿಯುವಾಗ ಶೆರ್ಪಾಗಳು ಪರ್ವತಾರೋಹಿಗಳ ಸರಕನ್ನು ಹೊತ್ತಿರುತ್ತಾರೆ. ಹೀಗಾಗಿ ಶೆರ್ಪಾಗಳಿಂದಲೂ ಕಸ ವಾಪಸ್ ತರಲು ಸಾಧ್ಯವಿಲ್ಲ.

ADVERTISEMENT

ದಂಡ ಕಟ್ಟುವುದೇ ಸುಲಭ
ಪರ್ವತಾರೋಹಣ ಆರಂಭಕ್ಕೂ ಮುನ್ನ ನೇಪಾಳ ಮತ್ತು ಟಿಬೆಟ್‌ಗಳಲ್ಲಿ ಪ್ರತೀ ತಂಡ 4,000 ಡಾಲರ್ (ಸುಮಾರು ₹ 2.7 ಲಕ್ಷ) ಭದ್ರತಾ ಠೇವಣಿ ಇರಿಸಬೇಕು. ತಂಡದ ಪ್ರತಿಯೊಬ್ಬ ಪರ್ವತಾರೋಹಿಯೂ ವಾಪಸ್ ಬರುವಾಗ ತನ್ನೊಂದಿಗೆ 8 ಕೆ.ಜಿ.ಯಷ್ಟು ಕಸ ವಾಪಸ್ ತರಬೇಕು. ವಾಪಸ್ ತರದಿದ್ದರೆ ಪ್ರತಿ 1 ಕೆ.ಜಿ. ಕಸಕ್ಕೆ 100 ಡಾಲರ್‌ (ಸುಮಾರು ₹ 6,800) ಅನ್ನು ಭದ್ರತಾ ಠೇವಣಿಯಲ್ಲಿ ಕಡಿತ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಕಸ ವಾಪಸಾತಿ ಯೋಜನೆ ಎಂದು ಹೆಸರಿಡಲಾಗಿದೆ. ಒಬ್ಬರಿಗೆ ಪರ್ವತಾರೋಹಣದ ಒಟ್ಟು ಖರ್ಚು 20,000 ಡಾಲರ್‌ನಿಂದ 1ಲಕ್ಷ  ಡಾಲರ್‌ವರೆಗೂ (ಸುಮಾರು ₹ 13.6 ಲಕ್ಷದಿಂದ ₹ 68 ಲಕ್ಷ) ಆಗುತ್ತದೆ. ಅದಕ್ಕೆ ಹೋಲಿಸಿದಲ್ಲಿ ದಂಡದ ಮೊತ್ತ ತೀರಾ ಕಡಿಮೆ. ಹೀಗಾಗಿ ಬಹುತೇಕರು ದಂಡ ಕಟ್ಟುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿಯೇ ಎವರೆಸ್ಟ್‌ನಲ್ಲಿ ನೂರಾರು ಟನ್‌ಗಟ್ಟಲೆ ಕಸ ಶೇಖರವಾಗಿದೆ.

25 ಟನ್‌ -ಕಸ ವಾಪಸಾತಿ ಯೋಜನೆ ಅಡಿ 2017ರಲ್ಲಿ ನೇಪಾಳ ವಾಪಸ್ ತರಿಸಿದ ಕಸ

15 ಟನ್ -ಯೋಜನೆ ಅಡಿ 2017ರಲ್ಲಿ ನೇಪಾಳ ವಾಪಸ್ ತರಿಸಿದ ಮಾನವ ತ್ಯಾಜ್ಯ
ಆಧಾರ: ಎಎಫ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.