ADVERTISEMENT

ಎಸ್-ಬ್ಯಾಂಡ್: ಉತ್ತರಿಸದ ನಾಯರ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:35 IST
Last Updated 13 ಫೆಬ್ರುವರಿ 2011, 19:35 IST

 ತಿರುವನಂತಪುರ (ಪಿಟಿಐ): ಅಂತರಿಕ್ಷ್ ಮತ್ತು ದೇವಾಸ್ ಮಲ್ಟಿಮೀಡಿಯ ನಡುವೆ ನಡೆದಿರುವ ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿರುವ ಉನ್ನತಾಧಿಕಾರದ ಸಮಿತಿ ತನಿಖೆ ನಡೆಸುತ್ತಿರುವುದರಿಂದ ತಾವು ಅದರ ಬಗ್ಗೆ ಏನನ್ನೂ ಹೇಳಲಾಗದು ಎಂದು ಮಾಜಿ ಇಸ್ರೊ ಅಧ್ಯಕ್ಷ ಜಿ. ಮಾಧವನ್ ನಾಯರ್ ಹೇಳಿದ್ದಾರೆ.

‘ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ಬಗ್ಗೆ ಸಮಿತಿ ತನಿಖೆ ನಡೆಸುತ್ತಿದೆ. ಅದರ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಲಾರೆ, ಆದರೆ ಇಲಾಖೆ ಮಾತ್ರ ನಿಯಮಗಳಿಗೆ ಅನುಸಾರವಾಗಿಯೇ ಕಾರ್ಯ ನಿರ್ವಹಿಸುತ್ತಿದೆ ಎಂದಷ್ಟೇ ನಾನು ಹೇಳಬಲ್ಲೆ’ ಎಂದು ಅವರು ಇಲ್ಲಿ ಭಾನುವಾರ ನಡೆದ  ‘ಕೇರಳ ಅಭಿವೃದ್ಧಿ ಸಮಾವೇಶ’ದ ಸಂದರ್ಭದಲ್ಲಿ ಪತ್ರಕರ್ತರಿಗೆ ತಿಳಿಸಿದರು.  2005ರಲ್ಲಿ  ಈ ವ್ಯವಹಾರ ಕುದುರಿತ್ತು. ಆಗ ನಾಯರ್ ಅವರು ಇಸ್ರೊ ಅಧ್ಯಕ್ಷರಾಗಿದ್ದರು.

‘ಸಮಿತಿಯ ವರದಿ ಬರಲಿ, ಆ ಬಳಿಕ ನಾನು ಪ್ರತಿಕ್ರಿಯಿಸುವೆ’ ಎಂದಷ್ಟೇ ಅವರು ತಿಳಿಸಿದರು. ಈ ವಿವಾದಿತ ನಿರ್ಧಾರ ಕೈಗೊಂಡಾಗ ಮಂಡಳಿ ಸಭೆಯಲ್ಲಿ ಅಂತರಿಕ್ಷ್ ನಿಗಮದ ಎಲ್ಲಾ ಸದಸ್ಯರೂ ಹಾಜರು ಇರಲಿಲ್ಲ ಎಂಬುದರ ಬಗ್ಗೆ ಅವರ ಗಮನ ಸೆಳೆದಾಗ, ‘ಅದರ ಬಗ್ಗೆ ನನ್ನಲ್ಲಿ ಯಾವುದೇ ದಾಖಲೆಗಳಿಲ್ಲ, ಹೀಗಾಗಿ ನಾನು ಇದಕ್ಕೆ ಪ್ರತಿಕ್ರಿಯಿಸಲಾರೆ’ ಎಂದರು.

ಆದರೆ ಫೆ.8ರಂದು ಹಗರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು, ತರಂಗಾಂತರ ಹಂಚಿಕೆ ನಮ್ಮ ಕೆಲಸವಲ್ಲ, ನಾವು ಉಪಗ್ರಹಗಳನ್ನು ನಿರ್ಮಿಸಿ ಕಾರ್ಯಾಚರಣೆ ಮಾಡುತ್ತೇವೆ ಅಷ್ಟೇ ಎಂದಿದ್ದರು. ಹೀಗಾಗಿ ಇದೀಗ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದಕ್ಕೆ ವಿಶೇಷ ಅರ್ಥ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT