ADVERTISEMENT

ಏಕಕಾಲಕ್ಕೆ ಚುನಾವಣೆ ಮುಂದಿನ ವಾರ ಚರ್ಚೆ

ಪಿಟಿಐ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಕುರಿತು ಚುನಾವಣಾ ಆಯೋಗ ಮತ್ತು ಕಾನೂನು ಆಯೋಗ ಮುಂದಿನ ವಾರ ಚರ್ಚೆ ನಡೆಸಲಿವೆ.

ಈ ವಿಷಯದ ಕುರಿತು ಇದೇ 16ರಂದು ಚರ್ಚೆ ನಡೆಸಲು ಕಾನೂನು ಆಯೋಗದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ.ಎಸ್‌.ಚೌಹಾಣ್‌ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಚುನಾವಣಾ ಆಯೋಗ ಆಹ್ವಾನ ನೀಡಿದೆ.

ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ಕಾನೂನು ಆಯೋಗ ಈಗಾಗಲೇ ಒಂದು ಪ್ರಾಥಮಿಕ ವರದಿ ಸಿದ್ಧಪಡಿಸಿದೆ. ಈ ವರದಿ ಸಿದ್ಧಪಡಿಸುವ ಮುನ್ನ ಸಂವಿಧಾನ ತಜ್ಞರು, ರಾಜಕೀಯ ಪಕ್ಷಗಳ ನಾಯಕರ ಅಭಿಪ್ರಾಯಗಳನ್ನು ಪಡೆದಿದೆ.

ADVERTISEMENT

2019ರಿಂದ ಏಕಕಾಲಕ್ಕೆ ಚುನಾವಣೆ ನಡೆಸುವುದನ್ನು ಆರಂಭಿಸಬಹುದು. ಬಳಿಕ 2024ರಲ್ಲಿ ಎರಡನೇ ಹಂತದಲ್ಲಿ ಇದೇ ವ್ಯವಸ್ಥೆಯನ್ನು ಮುಂದುವರಿಸಬಹುದು. ಇದಕ್ಕಾಗಿ ಜನಪ್ರತಿನಿಧಿ ಕಾಯ್ದೆಯ ಕೆಲ ಅಂಶಗಳಿಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಈ ತಿದ್ದುಪಡಿಗೆ ರಾಜ್ಯಗಳ ಅನುಮೋದನೆಯೂ ಬೇಕಾಗುತ್ತದೆ ಎಂದು ಕಾನೂನು ಆಯೋಗ ಅಭಿಪ್ರಾಯಪಟ್ಟಿದೆ.

ಸಂಸದೀಯ ಸ್ಥಾಯಿ ಸಮಿತಿ ಈ ವಿಷಯದ ಕುರಿತು 2016ರ ಡಿಸೆಂಬರ್‌ನಲ್ಲಿ ನೀಡಿದ್ದ ವರದಿಯ ಕುರಿತು ಕಾನೂನು ಸಚಿವಾಲಯವು ಚುನಾವಣಾ ಆಯೋಗದ ಅಭಿಪ್ರಾಯ ಕೇಳಿತ್ತು.

ಈ ಪ್ರಸ್ತಾವನೆಗೆ ಬೆಂಬಲ ಸೂಚಿಸಿದ್ದ ಚುನಾವಣಾ ಆಯೋಗ, ಏಕಕಾಲಕ್ಕೆ ಚುನಾವಣೆ ನಡೆಸಲು ಅಪಾರ ವೆಚ್ಚವಾಗುತ್ತದೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆಗಳನ್ನು ಅವಧಿಗೆ ಮುನ್ನವೇ ಅಂತ್ಯಗೊಳಿಸಲು ಮತ್ತು ವಿಸ್ತರಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡುವುದು ಅಗತ್ಯವಿದೆ ಎಂದು ತಿಳಿಸಿತ್ತು.

ಯಾವುದೇ ಸರ್ಕಾರದ ವಿರುದ್ಧ ಮಂಡಿಸುವ ಅವಿಶ್ವಾಸ ನಿರ್ಣಯದ ಜತೆಯಲ್ಲೇ ವಿಶ್ವಾಸನಿರ್ಣಯ ಸಹ ಇರಬೇಕು. ಇದರಿಂದ, ವಿರೋಧ
ಪಕ್ಷಕ್ಕೆ ಸರ್ಕಾರ ರಚಿಸಲು ಸಂಖ್ಯಾ ಬಲ ಇಲ್ಲದಿದ್ದರೆ ಆಡಳಿತ ಪಕ್ಷವನ್ನು ತೆಗೆದು ಹಾಕಲು ಸಾಧ್ಯವಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.