ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನೇ ಕೇಂದ್ರೀಕರಿಸಿ ನಡೆಯುತ್ತಿರುವ ಚುನಾವಣಾ ಪ್ರಚಾರವನ್ನು ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಟೀಕಿಸಿದ್ದು, ಬಿಜೆಪಿ ‘ಏಕವ್ಯಕ್ತಿ ಪಕ್ಷವಾಗುತ್ತಿದೆ’ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿಯಲ್ಲಿ ಒಬ್ಬ ನಾಯಕನ ಪ್ರಾಬಲ್ಯವಷ್ಟೇ ಇದೆ ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆಯನ್ನು ತಾನೂ ಒಪ್ಪುವುದಾಗಿ ಪಕ್ಷದ ನಾಯಕರಿಗೆ ಅಡ್ವಾಣಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಮೋದಿ ಅವರ ಪ್ರಚಾರ ಪ್ರಖರಗೊಳ್ಳುತ್ತಿದ್ದಂತೆಯೇ ಕಳೆದ ಕೆಲವು ವಾರಗಳಿಂದ ಅಡ್ವಾಣಿ ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿಯ ಕೆಲವು ನಾಯಕರು ಹೇಳುತ್ತಿದ್ದಾರೆ. ಫೆಬ್ರುವರಿ 27ರಂದು ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಡ್ವಾಣಿ ಟೀಕಾಪ್ರಹಾರ ಅತ್ಯಂತ ತೀವ್ರವಾಗಿತ್ತು ಎಂದು ಈ ನಾಯಕರು ತಿಳಿಸಿದ್ದಾರೆ.
ಆ ಸಭೆಯಲ್ಲಿ ಮೋದಿ ಮತ್ತು ರಾಜನಾಥ ಸಿಂಗ್ ಕೂಡ ಹಾಜರಿದ್ದರು.ಮೊದಲ ಪಟ್ಟಿಯ ಸಂಭಾವ್ಯ ಅಭ್ಯರ್ಥಿಗಳ ಬಲಾಬಲಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ‘ಬಿಜೆಪಿಯು ಏಕ ವ್ಯಕ್ತಿ ಪಕ್ಷವಾಗಿ ಪರಿವರ್ತನೆಯಾಗಿದೆ’ ಎಂದು ಫೆಬ್ರುವರಿ 24ರಂದು ಹರಿಯಾಣದಲ್ಲಿ ರಾಹುಲ್ ಗಾಂಧಿ ಹೇಳಿದ್ದನ್ನು ಒಪ್ಪಿಕೊಳ್ಳುವುದಾಗಿ ಅಡ್ವಾಣಿ ಹೇಳಿದ್ದರು. ಆಗ ಅಡ್ವಾಣಿ ಪಕ್ಕದಲ್ಲೇ ಮೋದಿ ಕುಳಿತಿದ್ದರು.
‘ಚುನಾವಣಾ ಪ್ರಚಾರ ಸಾಮೂಹಿಕ ಪ್ರಯತ್ನ. ಆದರೆ ಈ ಬಾರಿ ಮೋದಿ ಅವರನ್ನು ಬಿಟ್ಟರೆ ಬೇರೆ ಯಾರೂ
ಕಾಣಿಸುತ್ತಿಲ್ಲ. ಜನರನ್ನು ಆಕರ್ಷಿಸುವ ಸಾಮರ್ಥ್ಯವಿರುವ ಸುಷ್ಮಾ ಸ್ವರಾಜ್ ಅಂಥವರೂ ಯಾಕೆ ಪ್ರಚಾರದ ಮುಂಚೂಣಿಯಲ್ಲಿ ಇಲ್ಲ ಎಂದು ಅಡ್ವಾಣಿ ಪ್ರಶ್ನಿಸಿದ್ದಾರೆ’ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.