ನವದೆಹಲಿ (ಪಿಟಿಐ): ಅನಿಲ ಬೆಲೆ ಏರಿಕೆಗಾಗಿ ತಮ್ಮ ಹಾಗೂ ಇತರರ ವಿರುದ್ಧ 'ಸಂವಿಧಾನಬಾಹಿರ ಎಫ್. ಐ. ಆರ್. ಹಾಕುವಂತೆ ಆದೇಶ ನೀಡಿದ್ದಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಶುಕ್ರವಾರ ತೀವ್ರವಾಗಿ ಕಿಡಿ ಕಾರಿದ ಕೇಂದ್ರ ತೈಲ ಸಚಿವ ಎಂ. ವೀರಪ್ಪ ಮೊಯಿಲಿ ಅವರು ಏಪ್ರಿಲ್ 1ರಿಂದ ಬೆಲೆ ಏರಿಕೆ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ದೃಢ ಪಡಿಸಿದರು.
'ತಡೆ ಹಿಡಿಯುವ ಅಥವಾ ಸ್ಥಗಿತಗೊಳಿಸುವ ಪ್ರಶ್ನೆ ಎಲ್ಲಿದೆ? ಅದು (ಸರ್ಕಾರಿ ರಂಗ ಮತ್ತು ಖಾಸಗಿ ಉತ್ಪಾದಕರಿಬ್ಬರಿಗೂ ಅನಿಲ ಬೆಲೆಗಳನ್ನು ಏರಿಸುವ ನಿರ್ಧಾರ) ಆಡಳಿತಾತ್ಮಕ ಪ್ರಕ್ರಿಯೆಯಲ್ಲಿದೆ. ಕೇಂದ್ರ ಸಂಪುಟ ಅದನ್ನು ಎರಡು ಬಾರಿ ಪರಿಗಣಿಸಿದೆ ಮತ್ತು ಎರಡು ಬಾರಿ ಅನುಮೋದಿಸಿದೆ' ಎಂದು ಮೊಯಿಲಿ ಇಲ್ಲಿ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಂದರ್ಭದಲ್ಲಿ ವರದಿಗಾರರಿಗೆ ತಿಳಿಸಿದರು.
ಹೊಸ ದರಗಳು ದಶಲಕ್ಷ ಬ್ರಿಟಿಷ್ ಥರ್ಮಲ್ ಘಟಕಕ್ಕೆ ಈಗಿನ 4.2 ಅಮೆರಿಕನ್ ಡಾಲರ್ ನಿಂದ 8-8.4 ಅಮೆರಿಕನ್ ಡಾಲರ್ ಗೆ ಏರುವ ನಿರೀಕ್ಷೆ ಇದೆ. ಇದನ್ನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಮೊಯಿಲಿ ಪೂರ್ವಾಧಿಕಾರಿ ಎಸ್. ಜೈಪಾಲ್ ರೆಡ್ಡಿ ಮನವಿ ಮೇರೆಗೆ ನೇಮಿಸಿದ್ದ ಸಮಿತಿಯ ಶಿಫಾರಸು ಮೇರೆಗೆ ಈ ದರಗಳು ನಿಗದಿಯಾಗಿವೆ.
ರಾಷ್ಟ್ರದಲ್ಲಿ ಕೃತಕ ಅನಿಲ ಅಭಾವ ಸೃಷ್ಟಿಸಿ ತೈಲ ಬೆಲೆ ಏರಿಸುತ್ತಿರುವುದಕ್ಕಾಗಿ ವೀರಪ್ಪ ಮೊಯಿಲಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ವಿರುದ್ಧ ಎಫ್. ಐ. ಆರ್. ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಈ ವಾರಾರಂಭದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಜ್ಞಾಪಿಸಿದ್ದರು.
'ದೆಹಲಿ ಸರ್ಕಾರವು ಮೇಲ್ಮನವಿ ಪ್ರಾಧಿಕಾರ ಎಂದು ನಾನು ಭಾವಿಸುವುದಿಲ್ಲ. ಅವರು ಏನು ಮಾಡುತ್ತಿದ್ದಾರೋ ಅದು ಸಂಪೂರ್ಣವಾಗಿ ಸಂವಿಧಾನಬಾಹಿರ. ಅದು ಖಂಡಿತವಾದಿ ಒಕ್ಕೂಟ ತತ್ವಗಳಿಗೆ ವಿರುದ್ಧವಾದುದು' ಎಂದು ಮೊಯಿಲಿ ಹೇಳಿದರು.
'ಅವರು ಸಂವಿಧಾನದಲ್ಲಿ ಇಲ್ಲದ ಅಧಿಕಾರಗಳನ್ನು ಚಲಾಯಿಸುತ್ತಿದ್ದಾರೆ ಎಂಬುದಕ್ಕಎಫ್ ಐ.ಆರ್. ಪ್ರಕರಣ ಸ್ಪಷ್ಟ ನಿದರ್ಶನ. ಅದು ಸಂವಿಧಾನದ ವಿಧಿಗಳಿಗೆ ವಿರುದ್ಧವಾಗಿದೆ ಎಂದು ನಾನು ಹೇಳುವೆ' ಎಂದು ಕೇಂದ್ರ ಸಚಿವ ನುಡಿದರು.
ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಸಿ. ರಂಗರಾಜನ್ ನೇತೃತ್ವದ ಸಮಿತಿಯ ಶಿಫಾರಸು ಮೇರೆಗೆ ದರ ಏರಿಕೆ ನಿರ್ಧಾರ ಕೈಗೊಳ್ಳಲಾಗಿದೆ. ಶಿಫಾರಸಿನ ಒಂದು ಪದ ಅಥವಾ ಪೂರ್ಣವಿರಾಮವನ್ನೂ ನಾನು ಬದಲಾಯಿಸಿಲ್ಲ. ಹೀಗಿರುವಾಗ ಮೊಯಿಲಿ ತೀರ್ಪಿನ (ಬೆಲೆ ಏರಿಕೆಗೆ) ವಿಚಾರ ಎಲ್ಲಿದೆ? ಎಂದು ಸಚಿವರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.