ADVERTISEMENT

ಏರ್ ಇಂಡಿಯಾ ಮುಷ್ಕರ: 300 ಪೈಲಟ್‌ಗಳ ವಜಾ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 19:30 IST
Last Updated 11 ಜೂನ್ 2012, 19:30 IST

ನವದೆಹಲಿ (ಐಎಎನ್‌ಎಸ್): `ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಒಂದು ತಿಂಗಳಿನಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ಸ್ಥಗಿತಗೊಳಿಸಿ ಕೆಲಸಕ್ಕೆ ಹಾಜರಾಗದಿದ್ದರೆ ಮುನ್ನೂರು ಪೈಲಟ್‌ಗಳನ್ನು ಏರ್ ಇಂಡಿಯಾ ವಿಮಾನಯಾನ ಆಡಳಿತ ಮಂಡಳಿ ಕೆಲಸದಿಂದ ತೆಗೆದು ಹಾಕುವ ಸಾಧ್ಯತೆ ಇದೆ~ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಹೇಳಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, `ಪೈಲಟ್‌ಗಳು ನಡೆಸುತ್ತಿರುವ ಪ್ರತಿಭಟನೆ ಕಾನೂನು ಬಾಹಿರವಾಗಿದೆ. ಇದರಿಂದ ಏರ್ ಇಂಡಿಯಾಗೆ ಆರ್ಥಿಕವಾಗಿ ನಷ್ಟವಾಗುತ್ತಿರುವುದರ ಜೊತೆಗೆ ಪ್ರಯಾಣಿಕರು ಸಂಸ್ಥೆಯ ಮೇಲೆ ಇಟ್ಟಿರುವ ವಿಶ್ವಾಸಕ್ಕೂ ಕುತ್ತು ಬರುತ್ತಿದೆ. ಈಗಲೂ ಕಾಲ ಮಿಂಚಿಲ್ಲ. ಪೈಲಟ್‌ಗಳು ಪ್ರತಿಭಟನೆ ಸ್ಥಗಿತಗೊಳಿಸಿ ಕೆಲಸಕ್ಕೆ ಹಾಜರಾದರೆ ಅವರನ್ನು ಸ್ವಾಗತಿಸುತ್ತೇವೆ~ ಎಂದು ಹೇಳಿದ್ದಾರೆ.

ಸಚಿವರ ಹೇಳಿಕೆ ಕುರಿತು ಪ್ರತಿಭಟನಾ ನಿರತ ಪೈಲಟ್‌ಗಳನ್ನು ಸುದ್ದಿ ಸಂಸ್ಥೆ ಸಂಪರ್ಕಿಸಿದಾಗ, `ಪರಿಸ್ಥಿತಿ ಅವಲೋಕನ ಮಾಡುತಿದ್ದೇವೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ನಮ್ಮ ಒಗ್ಗಟ್ಟನ್ನು ಯಾರೂ ಒಡೆಯಲಾಗುವುದಿಲ್ಲ. ನಮ್ಮ ಬೇಡಿಕೆ ಒಂದೇ. ಈಗಾಗಲೇ ಕೆಲಸದಿಂದ ತೆಗೆದು ಹಾಕಿರುವ ಸಹೋದ್ಯೋಗಿಗಳನ್ನು ಪುನಃ ಕೆಲಸಕ್ಕೆ ಸೇರಿಕೊಳ್ಳಬೇಕು. ಭಾರತೀಯ ಪೈಲಟ್‌ಗಳ ಗಿಲ್ಡ್‌ಗೆ (ಐಪಿಜಿ) ಮಾನ್ಯತೆ ನೀಡಬೇಕೆಂದು~ ಎಂದು ಗಿಲ್ಡ್‌ನ ಹಿರಿಯ ಸದಸ್ಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕೆಲವು ದಿನಗಳ ಹಿಂದೆ ಏರ್ ಇಂಡಿಯಾ ವಿಮಾನಯಾನ ಆಡಳಿತ ಮಂಡಳಿ ಐಪಿಜಿ ಸದಸ್ಯರಾಗಿರುವ ಪ್ರತಿಭಟನಾ ನಿರತ 101 ಪೈಲಟ್‌ಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಶೀಘ್ರದಲ್ಲೇ ಹಾರಾಟ ನಡೆಸಲಿರುವ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಚಾಲನೆಗಾಗಿ ಇಂಡಿಯನ್ ಏರ್‌ಲೈನ್ಸ್‌ನ ಪೈಲಟ್‌ಗಳಿಗೆ ತರಬೇತಿ ನೀಡುತ್ತಿರುವುದನ್ನು ವಿರೋಧಿಸಿ ಮೇ 8ರಿಂದ ಏರ್ ಇಂಡಿಯಾ ಪೈಲಟ್‌ಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.