ADVERTISEMENT

ಒಖಿ ಚಂಡಮಾರುತ: 600 ಮೀನುಗಾರರು ನಾಪತ್ತೆ

ಪಿಟಿಐ
Published 14 ಡಿಸೆಂಬರ್ 2017, 19:30 IST
Last Updated 14 ಡಿಸೆಂಬರ್ 2017, 19:30 IST
ತಿರುವನಂತಪುರದ ಪೂಂಥುರಾದಲ್ಲಿ ಒಖಿ ಚಂಡಮಾರುತದ ಪರಿಣಾಮ ಮೃತಪಟ್ಟ ಮೀನುಗಾರರ ಕುಟುಂಬ ಸದಸ್ಯರನ್ನು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ಭೇಟಿ ಮಾಡಿ, ಸಾಂತ್ವನ ಹೇಳಿದರು. –ಪಿಟಿಐ ಚಿತ್ರ
ತಿರುವನಂತಪುರದ ಪೂಂಥುರಾದಲ್ಲಿ ಒಖಿ ಚಂಡಮಾರುತದ ಪರಿಣಾಮ ಮೃತಪಟ್ಟ ಮೀನುಗಾರರ ಕುಟುಂಬ ಸದಸ್ಯರನ್ನು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ಭೇಟಿ ಮಾಡಿ, ಸಾಂತ್ವನ ಹೇಳಿದರು. –ಪಿಟಿಐ ಚಿತ್ರ   

ನವದೆಹಲಿ: ಒಖಿ ಚಂಡಮಾರುತದ ಪರಿಣಾಮ ತಮಿಳುನಾಡು ಮತ್ತು ಕೇರಳದಲ್ಲಿ 600ಕ್ಕೂ ಹೆಚ್ಚು ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮಿಳುನಾಡಿನ 433 ಮತ್ತು ಕೇರಳದ 186 ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಡಿಸೆಂಬರ್‌ 2ರಂದು ಉಂಟಾದ ಒಖಿ ಚಂಡಮಾರುತದ ಪರಿಣಾಮ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿಯನ್ನು ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಇನ್ನೂ ನೀಡಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಮನೆ ಮನೆ ಭೇಟಿ ಮೂಲಕ ನಾಪತ್ತೆಯಾದವರ ಮಾಹಿತಿ ಸಂಗ್ರಹಿಸಲಾಗುವುದು. ನಂತರ ಒಟ್ಟಾರೆ ಚಿತ್ರಣ ದೊರೆಯಲಿದೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಒಖಿ ಚಂಡಮಾರುತದ ಪರಿಣಾಮ ಇದುವರೆಗೆ ಕೇರಳದಲ್ಲಿ 63 ಮತ್ತು ತಮಿಳುನಾಡಿನಲ್ಲಿ 14 ಮಂದಿ ಮೃತಪಟ್ಟಿದ್ದಾರೆ.

ರಾಹುಲ್‌ ಭೇಟಿ: ಒಖಿ ಚಂಡಮಾರುತದಿಂದ ಸಂಕಷ್ಟಕ್ಕೆ ಒಳಗಾದ ದಕ್ಷಿಣ ಕೇರಳದ ಕೆಲವು ಪ್ರದೇಶಗಳು ಮತ್ತು ತಮಿಳುನಾಡಿನ ಕನ್ಯಾಕುಮಾರಿಯ ಕರಾವಳಿ ಪ್ರದೇಶಕ್ಕೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ಭೇಟಿ ನೀಡಿದರು. 

ತಿರುವನಂತಪುರದ ಪೂಂಥುರಾ ಕರಾವಳಿ ತೀರದಲ್ಲಿ ಚಂಡಮಾರುತದಿಂದ ಮೃತಪಟ್ಟ ಮೀನುಗಾರರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ನಂತರ ಮಾತನಾಡಿದ ರಾಹುಲ್, ಇಂತಹ ಪ್ರಾಕೃತಿಕ ವಿಕೋಪದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಾಠ ಕಲಿಯಬೇಕಿದೆ. ಮೃತರ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದು ಭರವಸೆ ನೀಡಿದರು.

*
ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯ ತೆರಿಗೆ ಕೃಷಿ ಸಚಿವಾಲಯ ಇರುವಂತೆಯೇ ಮೀನುಗಾರರ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು.
–ರಾಹುಲ್‌ ಗಾಂಧಿ,
ಕಾಂಗ್ರೆಸ್‌ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.