ADVERTISEMENT

ಒಡಿಶಾ: ಪೂರೈಕೆಯಾಗದ ಆಹಾರ ಪೊಟ್ಟಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಭುವನೇಶ್ವರ (ಪಿಟಿಐ):  ಜಾಜ್‌ಪುರ ಜಿಲ್ಲೆಯಲ್ಲಿ ಒಣ ಭೂಮಿ ಗೋಚರವಾಗದ ಕಾರಣ ಪ್ರವಾಹ ಪೀಡಿತರಿಗೆ ಹೆಲಿಕಾಪ್ಟರ್‌ಗಳು ಆಹಾರ ಪೊಟ್ಟಣಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಒಡಿಶಾ ಸರ್ಕಾರ ಸೋಮವಾರ ರಕ್ಷಣಾ ಸಾಮಗ್ರಿ ತುಂಬಿದ ದೋಣಿಗಳನ್ನು ಕಳುಹಿಸಿದೆ. ಕೇಂದ್ರ ತಂಡ ಮಹಾನದಿಯಿಂದ ಪ್ರವಾಹದಲ್ಲಿ ಉಂಟಾದ ನಷ್ಟದ ಬಗ್ಗೆ ತಿಳಿಯಲು ಆಗಮಿಸಿದೆ.

` ಜಾಜ್‌ಪುರ ಜಿಲ್ಲೆಯ ಬಾರಿ ಬ್ಲಾಕ್ ಸಂಪೂರ್ಣ ಜಲಾವೃತವಾಗಿರುವುದರಿಂದ  ಆಹಾರವನ್ನು ಹೆಲಿಕಾಪ್ಟರ್ ಮೂಲಕ ಹಾಕಲಾಗಿಲ್ಲ~ ಎಂದು ಕಂದಾಯ ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಸಚಿವ ಎಸ್.ಎನ್. ಪ್ಯಾಟ್ರೋ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ನಂತರ ವರದಿಗಾರರಿಗೆ ತಿಳಿಸಿದ್ದಾರೆ.

ಬೈತರಣಿ, ಸುಬರ್ಣರೇಖಾ, ಬುಧಬಲಂಗ್ ಮತ್ತು ಅದರ ಉಪ ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದರೂ ಬ್ರಹ್ಮಣಿ ನದಿ ಪ್ರವಾಹ ಕಡಿಮೆಯಾಗಿಲ್ಲ ಎಂದ ಅವರು  ಬಾರಿ ಬ್ಲಾಕ್ ಮತ್ತು ಕೇಂದ್ರಪಾಡಾ ಜಿಲ್ಲೆಯ ರಾಜ್‌ನಗರ್, ಪಟ್ಟಾಮುಂಡೈ ಮತ್ತು ಔಲ್‌ನ ವಿವಿಧ ಪ್ರದೇಶಗಳು  ಬ್ರಹ್ಮಣಿ ನದಿ ನೀರಿನಿಂದ ಮುಳುಗಿವೆ ಎಂದು ತಿಳಿಸಿದ್ದಾರೆ.

`ಇತರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕನಿಷ್ಠ  ಐದು ಹೆಲಿಕಾಪ್ಟರ್‌ಗಳನ್ನು ಆಹಾರ ಪೊಟ್ಟಣ ಹಾಕಲು ನಿಯೋಜಿಸಲಾಗಿದೆ~ ಎಂದ ಪ್ಯಾಟ್ರೋ ಅವರು  ಕಾರ್ಯಾಚರಣೆಗೆ 460 ಕ್ಕೂ ಹೆಚ್ಚು ದೋಣಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಹಾರ ಪೊಟ್ಟಣಗಳನ್ನು ಸರ್ಕಾರ ಒದಗಿಸಲಾಗದ ಕಾರಣ ಜಾಜ್‌ಪುರ ಮತ್ತು ಕೇಂದ್ರಪಾಡ ಜಿಲ್ಲೆಗಳಲ್ಲಿ ಜನರು ಹಸಿವೆಯಿಂದ ಪೀಡಿತರಾಗಿರುವ ವರದಿಗಳು ಬಂದಿವೆ. ಪ್ರವಾಹದಿಂದ ಉಂಟಾಗಿರುವ ನಷ್ಟ ಅಂದಾಜಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಕೃಷಿ, ಆರೋಗ್ಯ ಮತ್ತು ಜಲ ಸಂಪನ್ಮೂಲ ಸಚಿವಾಲಯದ ನಾಲ್ಕು ಮಂದಿ ಸದಸ್ಯರ ಕೇಂದ್ರ ತಂಡ ಇಲ್ಲಿಗೆ ಆಗಮಿಸಿದೆ.

 `ಮಹಾನದಿಯಲ್ಲಿ ಉಂಟಾದ ಪ್ರವಾಹದ ನಷ್ಟ ಅಂದಾಜಿಗೆ ಈ ತಂಡ ಬಂದಿದ್ದರೂ ನಾವು ಅವರನ್ನು ಜಾಜ್‌ಪುರ ಜಿಲ್ಲೆಗೆ ಪರಿಸ್ಥಿತಿ ಅವಲೋಕಿಸಲು ಕರೆದೊಯ್ಯುತ್ತೇವೆ~ ಎಂದು ವಿಶೇಷ ಪರಿಹಾರ ಆಯುಕ್ತ ಪಿ.ಕೆ. ಮಹಾಪಾತ್ರ ತಿಳಿಸಿದ್ದು ಈ ತಂಡ ಮಂಗಳವಾರ ಮೂರು ಪಶ್ಚಿಮ ಜಿಲ್ಲೆಗಳಿಗೆ ಭೇಟಿ ನೀಡಲಿದೆ ಎಂದಿದ್ದಾರೆ.

ಬ್ರಹ್ಮಣಿ ನದಿಯ ಎರಡೂ ಬದಿಯಲ್ಲಿ  ವಾಸಿಸುವ ಹಲವಾರು ಜನರನ್ನು ಭಾನುವಾರ ರಾತ್ರಿ ಸುರಕ್ಷಿತ ಸ್ಥಳಗಳಿಗೆ  ಸ್ಥಳಾಂತರಿಸಲಾಯಿತು ಎಂದ ಸಚಿವರು ಜಾಜ್‌ಪುರ ಮತ್ತು ಕೇಂದ್ರಪಾಡದಲ್ಲಿ ಮಂಗಳವಾರದವರೆಗೆ ಪರಿಸ್ಥಿತಿ ಭೀಕರವಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.ಒಡಿಶಾ ಪ್ರಕೃತಿ ವಿಕೋಪ ಕ್ಷಿಪ್ರ ಕಾರ್ಯಾಚರಣೆ ಪಡೆ,  ರಾಷ್ಟ್ರೀಯ ಪ್ರಕೃತಿ ವಿಕೋಪ  ಪ್ರತಿಕ್ರಿಯೆ ತಂಡ ಮತ್ತು ಅಗ್ನಿ ಶಾಮಕ ದಳ ಕಾರ್ಯಾಚರಣೆಯಲ್ಲಿ ತೊಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.