ADVERTISEMENT

ಒಡಿಶಾ: ವಿವಾದ ಸೃಷ್ಟಿಸಿದ ಸಂಸದನ ಛಾಯಾಚಿತ್ರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2013, 19:33 IST
Last Updated 7 ಜುಲೈ 2013, 19:33 IST

ಭುವನೇಶ್ವರ:  ಕಾಂಗ್ರೆಸ್‌ನ ಯುವ ಸಂಸದರೊಬ್ಬರು ಇಬ್ಬರು ಮಹಿಳೆಯರೊಂದಿಗೆ ಈಜುಕೊಳದಲ್ಲಿದ್ದ ಛಾಯಾಚಿತ್ರವೊಂದು ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದು ಒಡಿಶಾದಲ್ಲಿ ವಿವಾದ ಸೃಷ್ಟಿಸಿದೆ.

ಬುಡಕಟ್ಟು ಜನರ ಪ್ರಾಬಲ್ಯವಿರುವ ನೌರಂಗ್‌ಪುರ ಜಿಲ್ಲೆಯ ಸಂಸತ್ ಸದಸ್ಯ ಪ್ರದೀಪ್ ಮಝಿ ಅವರು ಈಗಾಗಲೇ ಛಾಯಾಚಿತ್ರ ಪ್ರಕಟಿಸಿರುವ ದಿನ ಪತ್ರಿಕೆಯ ಸಂಪಾದಕರ ವಿರುದ್ಧ ಮತ್ತು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಪ್ರಕಟಿಸಿರುವ ಮತ್ತೊಬ್ಬರ ವಿರುದ್ಧ ನವದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

`ಛಾಯಾಚಿತ್ರ ನನ್ನದಲ್ಲ. ಇದು ನಕಲಿಯಾಗಿದ್ದು, ತಿದ್ದಲಾಗಿದೆ. ಚುನಾವಣೆ ಇನ್ನೇನು ಹತ್ತಿರದಲ್ಲಿರುವಾಗ ನನ್ನ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಇದನ್ನು ಎಲ್ಲಾ ಕಡೆ ಹಂಚಲಾಗಿದೆ' ಎಂದು ಮಝಿ ಆರೋಪಿಸಿದ್ದಾರೆ.

`ಸಂಸದರ ವರ್ಚಸ್ಸಿಗೆ ಹಾನಿ ಮಾಡಲು ಚಿತ್ರವನ್ನು ನಾವು ಪ್ರಕಟಿಸಿಲ್ಲ. ಈಗಾಗಲೇ ಹಲವು ಕಡೆಗಳಲ್ಲಿ ಈ ಚಿತ್ರ ಕಂಡು ಬಂದಿತ್ತು. ಯುವ ಸಂಸದರನ್ನು ಈ ಛಾಯಾಚಿತ್ರವು ಬಿಕ್ಕಟ್ಟಿಗೆ ಸಿಲುಕಿಸಬಹುದು ಎಂದಷ್ಟೇ ನಾವು ಬರೆದಿದ್ದೇವೆ' ಎಂದು ಸ್ಥಳೀಯ ಪತ್ರಿಕೆಯೊಂದರ ಸಂಪಾದಕ ನವೀನ್ ದಾಸ್ ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆಯಲ್ಲಿ ಸಂಸತ್ ಸದಸ್ಯತ್ವಕ್ಕೆ  ಮಝಿ ರಾಜೀನಾಮೆ ನೀಡಬೇಕು ಎಂದು ಆಡಳಿತಾರೂಢ ಬಿಜೆಡಿ ಒತ್ತಾಯಿಸಿದೆ. ಆದರೆ, ಕಾಂಗ್ರೆಸ್‌ನ ಇತರ ಸಂಸದರು ಮಝಿ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.