ADVERTISEMENT

ಒಳಮೀಸಲಾತಿ: ಉದಾಸೀನ ಧೋರಣೆಗೆ ಕೋರ್ಟ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 19:30 IST
Last Updated 11 ಜೂನ್ 2012, 19:30 IST

ನವದೆಹಲಿ (ಪಿಟಿಐ): ಕೇಂದ್ರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ `ಒಬಿಸಿ~ ವಿದ್ಯಾರ್ಥಿಗಳಿಗೆ ನೀಡಲಾದ ಶೇ 27ರ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಶೇ 4.5ರಷ್ಟು ಒಳಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಉದಾಸೀನ ಧೋರಣೆ ತೋರಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇಂತಹ ಸಂಕೀರ್ಣ ಹಾಗೂ ಸೂಕ್ಷ್ಮ ವಿಚಾರವನ್ನು ಸರ್ಕಾರ ಹಗುರವಾಗಿ ಪರಿಗಣಿಸಿರುವುದಕ್ಕೆ ನ್ಯಾಯಮೂರ್ತಿ ಕೆ.ಎಸ್. ರಾಧಾಕೃಷ್ಣನ್ ಹಾಗೂ ಜೆ.ಎಸ್. ಕೇಹರ್ ಅವರನ್ನೊಳಗೊಂಡ ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿದೆ.

 ಐಐಟಿ ಹಾಗೂ ಐಐಎಂನಂತಹ ಕೇಂದ್ರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 4.5ರಷ್ಟು ಒಳಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿ ಆಂಧ್ರ ಪ್ರದೇಶ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಲು ನ್ಯಾಯಪೀಠ ನಿರಾಕರಿಸಿದೆ.

ಯಾವುದೇ ಪೂರಕ ದಾಖಲೆ ಸಲ್ಲಿಸದೇ ಆಂಧ್ರ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಸಲ್ಲಿಸಿದ ಕೇಂದ್ರ ಸರ್ಕಾರದ ಉದಾಸೀನ ಧೋರಣೆಯನ್ನು ನ್ಯಾಯಪೀಠ ಖಂಡಿಸಿದ್ದು, ಅಟಾರ್ನಿ ಜನರಲ್ ಜಿ.ಇ. ವಹನ್ವತಿ ಅವರಿಗೆ ಸರ್ಕಾರದ ಪರವಾಗಿ ಅಗತ್ಯ ದಾಖಲೆ ಸಲ್ಲಿಸುವಂತೆ ಸೂಚಿಸಿದೆ. ಈ ಅರ್ಜಿಯ ಮುಂದಿನ ವಿಚಾರಣೆ ಬುಧವಾರ ನಡೆಯಲಿದೆ.

ಐಐಟಿ ಪ್ರವೇಶಕ್ಕೆ ಕೌನ್ಸೆಲಿಂಗ್ ಜಾರಿಯಲ್ಲಿದ್ದು, ಶೇ 4.5ರ ಒಳಮೀಸಲಾತಿ ಅನ್ವಯ 325 ಅಭ್ಯರ್ಥಿಗಳು ಕೌನ್ಸೆಲಿಂಗ್‌ಗೆ ಅರ್ಹರಾಗಿರುತ್ತಾರೆ. ಅವರಿಗೆ ಅವಕಾಶ ನೀಡದಿದ್ದಲ್ಲಿ ಅವರ ಭವಿಷ್ಯ ಹಾಳುಮಾಡಿದಂತೆ ಎಂದು ಕೇಂದ್ರ ಸರ್ಕಾರದ ಪರವಾಗಿ ವಾದಿಸಿದ ವಹನ್ವತಿ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.