ADVERTISEMENT

ಒಳ ಮೀಸಲಾತಿ: ಕಾಂಗ್ರೆಸ್ ಅಭ್ಯರ್ಥಿಗೆ ಆಯೋಗದ ನೋಟಿಸ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 9:45 IST
Last Updated 17 ಫೆಬ್ರುವರಿ 2012, 9:45 IST

ಫರೂಕಾಬಾದ್ (ಪಿಟಿಐ): ಕಾಂಗ್ರೆಸ್ ಅಭ್ಯರ್ಥಿಯ ಪರ ಬುಧವಾರ ರಾತ್ರಿ ಇಲ್ಲಿ ನಡೆದ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯ ಸಂದರ್ಭದಲ್ಲಿ ಕೇಂದ್ರದ ಉಕ್ಕು ಖಾತೆ ಸಚಿವ ಬೇಣಿ ಪ್ರಸಾದ್ ವರ್ಮಾ ಮತ್ತು ದಿಗ್ವಿಜಯ ಸಿಂಗ್ ಅವರು ವಿವಾದಾತ್ಮಕ ಹೇಳಿಕೆ ನೀಡಿರುವ ಕುರಿತಂತೆ ಚುನಾವಣಾ ಆಯೋಗವು ಕಾಂಗ್ರೆಸ್ ಅಭ್ಯರ್ಥಿ ಶಕುಂತಲಾ ದೇವಿ ಅವರಿಂದ ವಿವರಣೆ ಕೋರಿ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.

ಶಕುಂತಲಾ ದೇವಿ ಅವರು ಕೈಮ್ ಗಂಜ್ ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಅಲ್ಲಿ ಬೇಣಿ ಪ್ರಸಾದ್ ವರ್ಮಾ ಅವರು, ದೇವಿ ಪರವಾಗಿ ಪ್ರಚಾರ ಕೈಗೊಂಡಿದ್ದರು. ಮೀಸಲು ಕ್ಷೇತ್ರವಾದ ಕೈಮ್ ಗಂಜ್ ನ ಚುನಾವಣಾ ಅಧಿಕಾರಿ ಎಂ.ಕೆ.ಶರ್ಮಾ ಅವರು, ದೇವಿ ಅವರಿಗೆ ವಿವರಣೆ ಕೇಳಿ ನೋಟಿಸ್ ನೀಡಿದ್ದಾರೆ.

ಬುಧವಾರ ರಾತ್ರಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ವರ್ಮಾ ಅವರು, ~ ಮುಸ್ಲಿಮರಿಗೆ ನೀಡುವ ಮಿಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು~ ಎಂದು ಒತ್ತಾಯಿಸಿದ್ದರು.

ADVERTISEMENT

ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಮತ್ತು  ಕೇಂದ್ರದ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ಉಪಸ್ಥಿತಿಯಲ್ಲಿ  ರ್ಯಾಲಿಯಲ್ಲಿ ಮಾತನಾಡಿದ ವರ್ಮಾ ಅವರು, ~ಮುಸ್ಲಿಮರ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗುವುದು, ಚುನಾವಣಾ ಆಯೋಗ ಬೇಕಾದರೆ ನನಗೆ ನೋಟಿಸ್ ನೀಡಲಿ~ ಎಂದು ಚುನಾವಣಾ ಆಯೋಗಕ್ಕೆ ಸವಾಲ ಹಾಕಿದ್ದರು.

~ಮುಸ್ಲಿಮರ ಪರವಾಗಿ ಖುರ್ಷಿದ್ ಅವರು ಪ್ರಾಮಾಣಿಕವಾಗಿ ಹೋರಾಟ ನಡೆಸುತ್ತಿದ್ದಾರೆ~ ಎಂದು ನುಡಿದ ವರ್ಮಾ ಅವರು, ಇದೆ ವಿಷಯದಲ್ಲಿ ಇದಕ್ಕೂ  ಮೊದಲು ಚುನಾವಣಾ ಅಯೋಗವನ್ನು ಎದುರು ಹಾಕಿಕೊಂಡಿದ ಖುರ್ಷಿದ್ ಅವರನ್ನು ಬೆಂಬಲಿಸಿದರೆ, ~ಮುಸ್ಲಿಮರಿಗೆ ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಜಾರಿಯಲ್ಲಿರುವಂತೆ ಮೀಸಲಾತಿ ಸಿಗಬೇಕು~ ಎಂದು ದಿಗ್ವಿಜಯ ಸಿಂಗ್ ಪ್ರತಿಪಾದಿಸಿದ್ದರು.

ಮುಸ್ಲಿಮರಿಗೆ ಒಳ ಮೀಸಲಾತಿ ನೀಡುವ ಕುರಿತು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಪ್ರಕರಣ ತಣ್ಣಗಾಗುವ ಮೊದಲೇ ಅದೇ ಬಗೆಯ ಹೇಳಿಕೆ ನೀಡಿ ಉಕ್ಕು ಖಾತೆ ಸಚಿವ ಬೇಣಿ ಪ್ರಸಾದ್ ವರ್ಮಾ ಮತ್ತು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಚುನಾವಣಾ ಆಯೋಗದ ಈ ಕಾರಣರಾಗಿದ್ದಾರೆ.

ಚುನಾವಣಾ ಆಯೋಗವು ಈಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಖುರ್ಷಿದ್ ಅವರ ವಿರುದ್ಧ ರಾಷ್ಟ್ರಪತಿಗೆ ದೂರು ಸಲ್ಲಿಸಿದ ನಂತರ, ಖುರ್ಷಿದ್ ಅವರು, ತಮ್ಮ ಹೇಳಿಕೆಗೆ  ವಿಷಾದ ವ್ಯಕ್ತಪಡಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.