ADVERTISEMENT

ಓಡ್ ಹತ್ಯಾಕಾಂಡ: 23 ಜನರಿಗೆ ಶಿಕ್ಷೆ, 23 ಮಂದಿ ಖುಲಾಸೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST
ಓಡ್ ಹತ್ಯಾಕಾಂಡ: 23 ಜನರಿಗೆ ಶಿಕ್ಷೆ, 23 ಮಂದಿ ಖುಲಾಸೆ
ಓಡ್ ಹತ್ಯಾಕಾಂಡ: 23 ಜನರಿಗೆ ಶಿಕ್ಷೆ, 23 ಮಂದಿ ಖುಲಾಸೆ   

ಅಹಮದಾಬಾದ್/ಆನಂದ್ (ಪಿಟಿಐ/ಐಎಎನ್‌ಎಸ್): 2002ರಲ್ಲಿ ಗುಜರಾತ್‌ನ ಗೋಧ್ರಾ ನರಮೇಧದ ನಂತರ ವ್ಯಾಪಿಸಿದ್ದ ಕೋಮುಗಲಭೆಯ ಸಂದರ್ಭದಲ್ಲಿ ನಡೆದಿದ್ದ ಓಡ್ ಹತ್ಯಾಕಾಂಡ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು 23 ಆರೋಪಿಗಳು ತಪ್ಪಿತಸ್ಥರೆಂದು ಹೇಳಿದ್ದು ಸಾಕ್ಷ್ಯಗಳ ಕೊರತೆಯಿಂದ ಇನ್ನಿತರ 23 ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಆನಂದ್‌ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪೂನಂ ಸಿಂಗ್ ಈ ತೀರ್ಪು ನೀಡಿದರು. ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣವನ್ನು ಆನಂತರ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಸುಪ್ರೀಂಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ ಈ ಪ್ರಕರಣದ ವಿಚಾರಣೆ ನಡೆಸಿತ್ತು.
ಹಿನ್ನೆಲೆ: ಆನಂದ್ ಜಿಲ್ಲೆಯ ಓಡ್ ಗ್ರಾಮದಲ್ಲಿ 2002ರ ಮಾರ್ಚ್ 1ರಂದು ಈ ಹತ್ಯಾಕಾಂಡ ನಡೆದಿತ್ತು. ಗ್ರಾಮದ ಪಿರ್ವಾಲಿ ಭಗೋಲ್ ಪ್ರದೇಶದ ಮನೆಯೊಂದರಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 23 ಜನರನ್ನು ಕೂಡಿ ಹಾಕಿ ಬೆಂಕಿ ಹಚ್ಚಿ ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 47 ಆರೋಪಿಗಳಿದ್ದರು. ಅವರಲ್ಲಿ ಒಬ್ಬಾತ ವಿಚಾರಣೆಯ ಸಂದರ್ಭದಲ್ಲೇ ಮೃತಪಟ್ಟಿದ್ದ.

 ಓಡ್ ಪ್ರಕರಣಕ್ಕೆ ಸಂಬಂಧಿಸಿದಂತೆ 150 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
170ಕ್ಕೂ ಹೆಚ್ಚು ದಾಖಲೆಗಳನ್ನು ಕೋರ್ಟ್‌ಗೆ ನೀಡಲಾಗಿತ್ತು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಪಿ.ಎನ್.ಪರ್ಮಾರ್ ತಿಳಿಸಿದ್ದಾರೆ.

2009ರ ಅಂತ್ಯದಲ್ಲಿ ಪ್ರಕರಣದ ವಿಚಾರಣೆ ಆರಂಭಿಸಲಾಗಿತ್ತು. ಇನ್ನೇನು ವಿಚಾರಣೆ ಮುಕ್ತಾಯದ ಹಂತದಲ್ಲಿದ್ದಾಗ 2011ರ ಮೇ ತಿಂಗಳಿನಲ್ಲಿ ಆಗಿನ ನ್ಯಾಯಾಧೀಶರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದರು.

ಆನಂತರ ನ್ಯಾಯಾಧೀಶೆ ಪೂನಂ ಸಿಂಗ್ ಅವರನ್ನು ಪ್ರಕರಣದ ವಿಚಾರಣೆಗಾಗಿ ನೇಮಿಸಲಾಯಿತು. ಅವರ ಮುಂದೆ ಹೊಸದಾಗಿ ವಾದ, ಪ್ರತಿವಾದ ಮಂಡಿಸಲಾಗಿತ್ತು. ಗೋಧ್ರಾ ರೈಲು ದುರಂತದ ನಂತರ ನಡೆದ ಕೋಮುಗಲಭೆ ಪ್ರಕರಣಗಳ ಪೈಕಿ ತೀರ್ಪು ಪ್ರಕಟಿಸಲಾಗಿರುವ ಮೂರನೇ ಪ್ರಕರಣ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.