ADVERTISEMENT

ಔರಂಗಾಬಾದ್​ ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಪ್ರಕರಣ: ಅಬು ಜುಂದಾಲ್ ಸೇರಿ 7 ಮಂದಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2016, 9:36 IST
Last Updated 2 ಆಗಸ್ಟ್ 2016, 9:36 IST
ಅಬು ಜುಂದಾಲ್
ಅಬು ಜುಂದಾಲ್   

ನವದೆಹಲಿ (ಪಿಟಿಐ): 2006ರಲ್ಲಿ ಔರಂಗಾಬಾದ್​ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ 26/11 ಮುಂಬೈ ದಾಳಿಯ ಸೂತ್ರಧಾರ, ಲಷ್ಕರೆ ತೊಯ್ಬಾ ಉಗ್ರ ಸಂಘಟನೆಯ ಸದಸ್ಯ ಅಬು ಜುಂದಾಲ್ ಸೇರಿ 7 ಜನರಿಗೆ ಮೋಕಾ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅದೇ ವೇಳೆ ಪ್ರಸ್ತುತ ಪ್ರಕರಣದಲ್ಲಿ  ಮೊಹಮ್ಮದ್ ಮುಜಾಫಿರ್ ತನ್ವೀರ್ ಮತ್ತು ಡಾ. ಮೊಹಮ್ಮದ್ ಶರೀಫ್  ಎಂಬ ಅಪರಾಧಿಗಳಿಗೆ 14 ವರ್ಷ ಜೈಲು ಶಿಕ್ಷೆ ಮತ್ತು ಮುಶ್ತಾಕ್  ಅಹ್ಮದ್ , ಜಾವೇದ್ ಅಹ್ಮದ್ ಮತ್ತು ಅಫ್ಜಲ್ ಖಾನ್ ಎಂಬ ಅಪರಾಧಿಗಳಿಗೆ 8 ವರ್ಷ ಶಿಕ್ಷೆ ವಿಧಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮೋಕಾ ವಿಶೇಷ ನ್ಯಾಯಾಲಯ ಕಳೆದ ವಾರ ಅಬು ಜುಂದಾಲ್ ಸೇರಿದಂತೆ ಒಟ್ಟು 12 ಜನರು ದೋಷಿಗಳು ಎಂದು ತೀರ್ಪು ನೀಡಿ 8 ಜನರನ್ನು ಖುಲಾಸೆಗೊಳಿಸಿತ್ತು.

2002ರ ಗುಜರಾತ್ ಗಲಭೆಯ ಬಳಿಕ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ವಿಶ್ವ ಹಿಂದು ಪರಿಷತ್​ನ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರನ್ನು ಹತ್ಯೆಗೈಯ್ಯಲು ಸಂಚು ರೂಪಿಸಿ, ಜುಂದಾಲ್ ಮತ್ತು ಆತನ ಸಹಚರರು ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಕೈವಶವಿರಿಸಿಕೊಂಡಿದ್ದರು.

ಮೋದಿ ಮತ್ತು ತೊಗಾಡಿಯಾ ಹತ್ಯೆಗೆ ಸಂಚು ಹಾಗೂ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹದ ಅಡಿಯಲ್ಲಿ ಜುಂದಾಲ್ ಸೇರಿದಂತೆ ಒಟ್ಟು 22 ಮಂದಿ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು.

ಜುಂದಾಲ್ ಬಂಧನದ ಬಳಿಕ ಮೋಕಾ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಕಳೆದ ಮಾರ್ಚ್ ತಿಂಗಳಲ್ಲಿ ವಿಚಾರಣೆ ಮುಕ್ತಾಯಗೊಂಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.