ನವದೆಹಲಿ (ಪಿಟಿಐ): ಸತತ ಎರಡು ವರ್ಷಗಳ ಬರಗಾಲದಿಂದ ಕಂಗೆಟ್ಟಿರುವ ದೇಶದ ರೈತ ಸಮುದಾಯದ ಆರ್ಥಿಕ ಸಂಕಷ್ಟ ದೂರ ಮಾಡಲು ಕೇಂದ್ರ ಸರ್ಕಾರವು ‘ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನಾ’ ಎಂಬ ಹೊಸ ಬೆಳೆ ವಿಮೆ ಯೋಜನೆಯನ್ನು ಬುಧವಾರ ಪ್ರಕಟಿಸಿದೆ.
ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಾರಿಗೆ ಬರುತ್ತಿರುವ ಅತಿ ಕಡಿಮೆ ಕಂತಿನ ಬೆಳೆ ವಿಮೆ ಯೋಜನೆ ಇದಾಗಿದೆ. 19.4 ಕೋಟಿ ಹೆಕ್ಟೇರ್‌ಗಳಷ್ಟು ಸಾಗುವಳಿ ಪ್ರದೇಶದ ಶೇ 50ರಷ್ಟು ಭೂಪ್ರದೇಶದಲ್ಲಿ ನೈಸರ್ಗಿಕ ಪ್ರಕೋಪಗಳಿಂದ ಆಗುವ ಬೆಳೆ ನಷ್ಟವನ್ನು ಈ ಯೋಜನೆ ಪೂರ್ತಿಯಾಗಿ ಭರ್ತಿ ಮಾಡಿಕೊಡಲಿದ್ದು, ಇದು₹ 17,600 ಕೋಟಿ ಮೊತ್ತದ ಕೃಷಿ ವಿಮೆ ಯೋಜನೆಯಾಗಿದೆ.
ರೈತರು ಪಾವತಿಸಬೇಕಾದ ಕಂತಿನ ಹಣವನ್ನು ಗರಿಷ್ಠ ಶೇ 2ರಿಂದ ಶೇ 5ರವರೆಗೆ ನಿಗದಿಪಡಿಸಲಾಗಿದೆ. ಕಂತಿನ ಉಳಿದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಭರಿಸಲಿವೆ. ಈ ಸಾಲಿನ ಮುಂಗಾರಿನ ಹಂಗಾಮಿನಿಂದ ಈ ಯೋಜನೆ ಜಾರಿಗೆ ಬರಲಿದೆ. ಇಡೀ ರಾಜ್ಯದ ವಿಮೆ ಯೋಜನೆಯನ್ನು ಒಂದು ವಿಮೆ ಸಂಸ್ಥೆಯ ಸುಪರ್ದಿಗೆ ಒಪ್ಪಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.