ADVERTISEMENT

ಕನಿಮೊಳಿ ಕಣ್ಣೀರಿಗೆ ದೊರಕದ ಮುಕ್ತಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2011, 19:30 IST
Last Updated 3 ನವೆಂಬರ್ 2011, 19:30 IST
ಕನಿಮೊಳಿ ಕಣ್ಣೀರಿಗೆ ದೊರಕದ ಮುಕ್ತಿ
ಕನಿಮೊಳಿ ಕಣ್ಣೀರಿಗೆ ದೊರಕದ ಮುಕ್ತಿ   

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದ ಆಪಾದಿತರಾದ ಡಿಎಂಕೆ ಸಂಸದೆ ಕನಿಮೊಳಿ ಮತ್ತು ಇತರ ಏಳು ಮಂದಿಯ ಜಾಮೀನು ಅರ್ಜಿಯನ್ನು ದೆಹಲಿ ಕೋರ್ಟ್ ಗುರುವಾರ ತಿರಸ್ಕರಿಸಿದೆ.

`ಆಪಾದನೆ ಬಹಳ ಗಂಭೀರ ಸ್ವರೂಪದ್ದಾಗಿರುವುದರಿಂದ ಕನಿಮೊಳಿ, ಟೆಲಿಕಾಂ ಇಲಾಖೆಯ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ಮತ್ತಿತರರಿಗೆ ಜಾಮೀನು ನೀಡಲು ಸಾಧ್ಯವಿಲ್ಲ~ ಎಂದು ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ತಿಳಿಸಿದ್ದಾರೆ.

ಮಾಜಿ ಸಚಿವ ರಾಜಾ ಅವರ ಆಪ್ತ ಕಾರ್ಯದರ್ಶಿ ಆರ್.ಕೆ.ಚಂದೋಲಿಯ, ಸ್ವಾನ್ ಟೆಲಿಕಾಂ ಕಂಪೆನಿ ಪ್ರವರ್ತಕ ಶಾಹಿದ್ ಉಸ್ಮಾನ್ ಬಲ್ವಾ, ಕಲೈಙ್ಞರ್ ಟಿ.ವಿಯ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್, ಆಸಿಫ್ ಬಲ್ವಾ, ರಾಜೀವ್ ಅಗರವಾಲ್ ಮತ್ತು ಚಿತ್ರ ನಿರ್ಮಾಪಕ ಕರೀಂ ಮೊರಾನಿ  ಜಾಮೀನು ಅರ್ಜಿ ತಿರಸ್ಕೃತಗೊಂಡವರಲ್ಲಿ ಸೇರಿದ್ದಾರೆ.

`ಕನಿಮೊಳಿ ಅವರು ಮಾಜಿ ಮುಖ್ಯಮಂತ್ರಿ ಅವರ ಮಗಳು ಮತ್ತು ಸಂಸದೆ. ಅಲ್ಲದೆ ಸಮಾಜದ ಉನ್ನತ ಸ್ತರದಲ್ಲಿ ಇರುವವರಾಗಿರುವುದರಿಂದ ಮಹಿಳೆ ಎಂಬ ಕಾರಣಕ್ಕೆ ಎಲ್ಲೂ ತಾರತಮ್ಯವಾಗಿಲ್ಲ. ಆದ್ದರಿಂದ ಅವರಿಗೆ ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಬೇಕು ಎಂಬ ಮನವಿ ಸಮಂಜಸವಲ್ಲ~ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. 

ಉಮ್ಮಳಿಸಿದ ದುಃಖ: ಆಪ್ತರಿಗೆ ಆಘಾತ

ನವದೆಹಲಿ: ಜಾಮೀನು ಅರ್ಜಿ ತಿರಸ್ಕೃತವಾಗುತ್ತಿದ್ದಂತೆಯೇ ತೀವ್ರ ಆತಂಕ, ಒತ್ತಡ ಹಾಗೂ ಭಾವೋದ್ವೇಗದಕ್ಕೆ ಒಳಗಾದ ಕನಿಮೊಳಿ ಒತ್ತಿ ಬರುತ್ತಿದ್ದ ದುಃಖವನ್ನು ಹತ್ತಿಕ್ಕಿಕೊಳ್ಳಲಾಗದೆ ನ್ಯಾಯಾಲಯದ ಆವರಣದಲ್ಲಿದ್ದ ತಾಯಿಯನ್ನು ತಬ್ಬಿ ಗಳಗಳನೆ ಅಳಲಾರಂಭಿಸಿದರು.

ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸುತ್ತಿದ್ದಂತೆಯೇ, ಕೇಸರಿ ಬಣ್ಣದ ಸಲ್ವಾರ್ ಕಮೀಜ್ ಧರಿಸಿದ್ದ 43 ವರ್ಷದ ಕನಿಮೊಳಿ ಅಸಹಾಯಕರಾಗಿ ಕಣ್ಣೀರು ಸುರಿಸತೊಡಗಿದರು. ತಾಯಿಯನ್ನು ನೋಡಿದ ನಂತರ ಅವರ ದುಃಖ ಮತ್ತಷ್ಟು ಉಮ್ಮಳಿಸಿತು.

ಮೊದಲು, ನ್ಯಾಯಾಲಯದಲ್ಲಿ ಜನರು ಕಿಕ್ಕಿರಿದು ಸೇರಿದ್ದ ಕಾರಣ ನ್ಯಾಯಾಧೀಶರ ಆದೇಶವನ್ನು ಸರಿಯಾಗಿ ಕೇಳಿಸಿಕೊಳ್ಳದ ಕನಿಮೊಳಿ ಗಲಿಬಿಲಿಗೊಂಡರು. ಅರ್ಜಿಯನ್ನು ತಿರಸ್ಕರಿಸಲಾಗಿದೆಯೋ ಅಥವಾ ವಿಚಾರಣೆ ಮುಂದೂಡಲಾಗಿದೆಯೋ ಎಂದು ಅವರು ತಮ್ಮ ವಕೀಲರನ್ನು ಕೇಳಿ ತಿಳಿದುಕೊಂಡರು.

ಸುಮಾರು 45 ನಿಮಿಷಗಳ ಕಾಲ ಅವರು ತಮ್ಮ ವಕೀಲರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎ.ರಾಜಾ ಅವರ ಪತ್ನಿ ಪರಮೇಶ್ವರಿ ಸಹ ಜೊತೆಗಿದ್ದರು.

ಒಂದು ಹಂತದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಕನಿಮೊಳಿ ಮಾಧ್ಯಮದವರ ಮೇಲೆ ರೇಗಿದರು. `ನೀವು ಮನುಷ್ಯರಲ್ಲವೇ? ನಿಮಗೆ ಮನುಷ್ಯತ್ವ ಎಂಬುದೇ ಇಲ್ಲವೇ~ ಎಂದು ಮಾಧ್ಯಮದವರ ಮೇಲೆ ಹರಿಹಾಯ್ದರು. `ದಯಮಾಡಿ ನನ್ನನ್ನು ಒಂಟಿಯಾಗಿರಲು ಬಿಡಿ. ನೀವು ಇಲ್ಲಿಂದ ಹೊರಡಿ~ ಎಂದು ಕೂಗಾಡಿದರು.

ನ್ಯಾಯಾಲಯದಲ್ಲಿದ್ದ ಅವರ ತಾಯಿ ರಾಜಾತಿ ಅಮ್ಮಾಳ್, ಪತಿ ಜಿ.ಅರವಿಂದನ್, ಪುತ್ರ, ಡಿಎಂಕೆ ಧುರೀಣರಾದ ಟಿ.ಆರ್.ಬಾಲು, ಟಿ.ಕೆ.ಎಸ್. ಇಳಂಗೋವನ್, ದೊರೈ ಮುರುಗನ್, ವಾಸಂತಿ ಸ್ಟಾಲಿನ್, ಚಿತ್ರತಾರೆ ಖುಷ್ಬೂ ಸಹ ಆಘಾತಕ್ಕೆ ಒಳಗಾದಂತೆ ಕಂಡುಬಂದರು. ಜಾಮೀನು ಸಿಗುತ್ತದೆ ಎಂಬ ಆಶಾಭಾವನೆಯಿಂದ ನ್ಯಾಯಾಲಯದ ಆವರಣದಲ್ಲಿ ಸೇರಿದ್ದ ಡಿಎಂಕೆ ಕಾರ್ಯಕರ್ತರು, ಬೆಂಬಲಿಗರು ಮೌನಕ್ಕೆ ಶರಣಾಗಿದ್ದರು.

ಇವರೆಲ್ಲರ ಮೇಲೆ ಹೊರಿಸಲಾಗಿರುವ ದೋಷಾರೋಪಗಳು ಸಾಬೀತಾದರೆ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ಆಗಬಹುದು ಎಂಬ ಕಾರಣಕ್ಕೆ ಇವರ ಜಾಮೀನು ಅರ್ಜಿಗೆ ಸಿಬಿಐ ವಿರೋಧಿಸಿರಲಿಲ್ಲ.

ಮುಖ್ಯ ದೋಷಾರೋಪ ಪಟ್ಟಿ ಮತ್ತು ಪೂರಕ ದೋಷಾರೋಪ ಪಟ್ಟಿ ಎಂಬ ತಾರತಮ್ಯದ ಪ್ರಶ್ನೆ ಇಲ್ಲ. ಕಾನೂನಿನ ಎದುರಿಗೆ ಒಂದೇ ದೋಷಾರೋಪ ಪಟ್ಟಿ ಎಂದು ತಿಳಿಸಿರುವ ನ್ಯಾಯಾಧೀಶರು, ಸಿಬಿಐ ನಿಲುವನ್ನು ತಳ್ಳಿಹಾಕಿದ್ದಾರೆ.

ಆಪಾದಿತರು ಕಳೆದ 5ರಿಂದ 9 ತಿಂಗಳುಗಳ ಕಾಲ ಜೈಲಿನಲ್ಲಿ ಕಾಲ ನೂಕುತ್ತಿರುವುದರಿಂದ ಮತ್ತು ವಿಚಾರಣೆ ಶೀಘ್ರದಲ್ಲಿ ಮುಗಿಯುವ ಸಾಧ್ಯತೆ ಇಲ್ಲದಿರುವುದರಿಂದ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂಬ ಮನವಿಯನ್ನೂ ಅವರು ಒಪ್ಪಿಕೊಳ್ಳಲಿಲ್ಲ.

ಆಪಾದಿತರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಮತ್ತು ಜೀವಾವಧಿ ಶಿಕ್ಷೆಗೆ ಅರ್ಹವಾದ `ನಂಬಿಕೆಗೆ ದ್ರೋಹ~ದಂತಹ ಆಪಾದನೆಗಳು ಇರುವುದರಿಂದ ಜಾಮೀನು ನೀಡುವುದು ಸರಿಯಲ್ಲ ಎಂದು ತೀರ್ಪು ತಿಳಿಸಿದೆ.

ಆಪಾದಿತರಲ್ಲಿ ಐವರ ವಿರುದ್ಧ ಮಾಡಲಾಗಿರುವ ದೋಷಾರೋಪಗಳು ಕಡಿಮೆ ಶಿಕ್ಷೆಗೆ ಒಳಪಡುವಂತಹವು, ಆದ್ದರಿಂದ ಜಾಮೀನಿಗೆ ವಿರೋಧಿಸುವುದಿಲ್ಲ ಎಂಬ ಸಿಬಿಐ ನಿಲುವನ್ನು ಒಪ್ಪದ ನ್ಯಾಯಾಧೀಶರು, ಇವರೆಲ್ಲರ ವಿರುದ್ಧ ಕ್ರಿಮಿನಲ್ ಸಂಚು ನಡೆಸಿದ ಆಪಾದನೆಗಳು ಇರುವುದನ್ನು ಮರೆಯಬಾರದು ಎಂದಿದ್ದಾರೆ.

ADVERTISEMENT


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.