ADVERTISEMENT

ಕಪ್ಪುಹಣ: ಶ್ವೇತಪತ್ರಕ್ಕೆ ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST
ಕಪ್ಪುಹಣ: ಶ್ವೇತಪತ್ರಕ್ಕೆ ಬಿಜೆಪಿ ಆಗ್ರಹ
ಕಪ್ಪುಹಣ: ಶ್ವೇತಪತ್ರಕ್ಕೆ ಬಿಜೆಪಿ ಆಗ್ರಹ   

ಭುವನೇಶ್ವರ (ಪಿಟಿಐ): ವಿದೇಶಗಳಲ್ಲಿರುವ ಕಪ್ಪು ಹಣ  ಮರಳಿ ತರಲು ಯುಪಿಎ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ದೇಶದ ಜನರಿಗೆ ತಿಳಿಸಲು ಶ್ವೇತಪತ್ರ ಹೊರಡಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಆಗ್ರಹಿಸಿದೆ. ಈ ಬಗ್ಗೆ ಸಮಗ್ರ ಚರ್ಚೆಗೆ ವಿಶೇಷ ಸಂಸತ್ ಅಧಿವೇಶನ ಕರೆಯುವಂತೆಯೂ ಪಕ್ಷ ಸೋಮವಾರ ಒತ್ತಾಯಿಸಿದೆ.

`ಕಪ್ಪುಹಣವನ್ನು ಭಾರತಕ್ಕೆ ಮರಳಿ ತರುವಲ್ಲಿ ಸರ್ಕಾರ ರೂಪಿಸಿರುವ ಸಮಗ್ರ ಯೋಜನೆ ಕುರಿತು ಪ್ರಧಾನ ಮಂತ್ರಿ ದೇಶದ ಜನತೆಗೆ ತಿಳಿಸಬೇಕು~ ಎಂದು ಪಕ್ಷದ ಹಿರಿಯ ನಾಯಕ ರಾಜನಾಥ್ ಸಿಂಗ್ ಬೇಡಿಕೆ ಮುಂದಿಟ್ಟಿದ್ದಾರೆ.

ಒಂದು ವೇಳೆ ಈ ವಿಷಯದ ಬಗ್ಗೆ ಸರ್ಕಾರಕ್ಕೆ ನೈಜ ಕಾಳಜಿ ಮತ್ತು ಬದ್ಧತೆ ಇದ್ದಲ್ಲಿ ಚಳಿಗಾಲ ಅಧಿವೇಶನ ನಂತರ ವಿಶೇಷ ಅಧಿವೇಶನ ಕರೆಯಲಿ. ಭಷ್ಟಾಚಾರ ಮತ್ತು ಕಪ್ಪುಹಣ ತಡೆಗೆ ಸಮಗ್ರ ರಾಷ್ಟ್ರೀಯ ನೀತಿ ರೂಪಿಸಲು ಚರ್ಚೆಗೆ ಅವಕಾಶ ನೀಡಲಿ ಎಂದರು.

ಭ್ರಷ್ಟಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಗಟ್ಟಿ ಮತ್ತು ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಲು ಯುಪಿಎ ಸರ್ಕಾರ ಹಿಂದೇಟು ಹಾಕುತ್ತಿದೆ. ಗಂಭೀರ ಸಮಸ್ಯೆಯಿಂದ ನುಣಚಿಕೊಳ್ಳಲು ಯತ್ನಿಸುತ್ತಿದ್ದು ಅವಕಾಶವಾದಿ ರಾಜಕಾರಣ ಮಾಡುತ್ತಿದೆ ಎಂದು ರಾಜನಾಥ್ ಸಿಂಗ್ ವಾಗ್ದಾಳಿ ಮಾಡಿದರು.

`ಈ ವಿಷಯ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಈಡುಮಾಡಿದ್ದು ಅದರಿಂದ ತಪ್ಪಿಸಿಕೊಳ್ಳಲು ಬಾಬಾ ರಾಮ್‌ದೇವ್ ಮತ್ತು ಅವರ ಅನುಯಾಯಿಗಳ ಮೇಲೆ ಮುಗಿಬಿದ್ದಿದೆ~ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.