ADVERTISEMENT

ಕಬೀರ್‌ ಬೇಡಿಗೆ 4ನೇ ಮದುವೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2016, 19:30 IST
Last Updated 17 ಜನವರಿ 2016, 19:30 IST
ಕಬೀರ್‌ ಬೇಡಿಗೆ 4ನೇ ಮದುವೆ
ಕಬೀರ್‌ ಬೇಡಿಗೆ 4ನೇ ಮದುವೆ   

ಮುಂಬೈ (ಪಿಟಿಐ): ಹಿರಿಯ ಬಾಲಿವುಡ್‌ ನಟ ಕಬೀರ್‌ ಬೇಡಿ (70) ಅವರು ಬ್ರಿಟನ್‌ ಮೂಲದ ಪರ್ವೀನ್‌ ದುಸಾಂಜ್‌ (42) ಅವರೊಂದಿಗೆ ಭಾನುವಾರ ಇಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇದು ಕಬೀರ್‌ ಅವರ ನಾಲ್ಕನೇ ಮದುವೆ. ಕಳೆದ ಒಂದು ದಶಕದಿಂದ ಕಬೀರ್‌ ಬೇಡಿ ಮತ್ತು ಪರ್ವೀನ್‌ ದುಸಾಂಜ್‌ ಒಟ್ಟಿಗೆ ವಾಸಿಸುತ್ತಿದ್ದರು. ಕಬೀರ್‌ ಬೇಡಿ ಅವರ 70ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ದಂಪತಿ ಈ ವಿಷಯವನ್ನು ಪ್ರಕಟಿಸಿ ಅತಿಥಿಗಳನ್ನು ಚಕಿತಗೊಳಿಸಿದರು.

ಆದರೆ ಬೇಡಿ ಮಗಳು ಪೂಜಾ ಅವರು ಮದುವೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಪ್ರತಿಯೊಂದು ಕಾಲ್ಪನಿಕ ಕಥೆಯಲ್ಲಿ ದುಷ್ಟ ಮಾಟಗಾತಿ ಅಥವಾ ಮಲತಾಯಿ ಇರುತ್ತಾಳೆ. ನನ್ನ ಜೀವನದಲ್ಲೂ ಈಗ ಬಂದಿದ್ದಾಳೆ’ ಎಂದು ಆಕೆ ಕಟುವಾಗಿ ‘ಟ್ವೀಟ್‌’ ಮಾಡಿದ್ದಾರೆ.  ಪೂಜಾ, ಕಬೀರ್‌ ಬೇಡಿಯ ಮೊದಲ ಪತ್ನಿ  ಪ್ರತಿಮಾ ಬೇಡಿ ಮಗಳು.

ಕಬೀರ್‌ ಬೇಡಿ ಮೊದಲ ಬಾರಿ ಒಡಿಸ್ಸಿ ನೃತ್ಯಗಾರ್ತಿ ಪ್ರತಿಮಾ ಬೇಡಿ ಅವರನ್ನು ಮದುವೆಯಾಗಿದ್ದರು. ಇವರಿಗೆ ಪೂಜಾ ಮತ್ತು ಸಿದ್ಧಾರ್ಥ ಎನ್ನುವ ಮಕ್ಕಳಿದ್ದಾರೆ. ನಂತರ ಎರಡನೇ ಬಾರಿ ಬ್ರಿಟನ್‌ ಮೂಲದ ಫ್ಯಾಷನ್‌ ವಿನ್ಯಾಸಗಾರ್ತಿ ಸುಸಾನ್‌ ಹಂಫ್ರೆಯ್ಸ್‌ ಅವರನ್ನು ವಿವಾಹವಾದರು. ಇವರಿಗೆ ಆ್ಯಡಂ ಎನ್ನುವ ಪುತ್ರನಿದ್ದು, ‘ಹಲೋ? ಕೌನ್‌ ಹೈ!’ ಎನ್ನುವ ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಪ್ರವೇಶಿಸಿದ.

ಸುಸಾನ್‌ ಜತೆ ದಾಂಪತ್ಯ ಬಹುದಿನ ಉಳಿಯಲಿಲ್ಲ. ಸುಸಾನ್‌ಗೆ ವಿಚ್ಛೇದನ ನೀಡಿದ ಕಬೀರ್‌ ಬೇಡಿ, ಟಿವಿ, ರೇಡಿಯೊ ನಿರೂಪಕಿ ನಿಕ್ಕಿ ಬೇಡಿ ಅವರನ್ನು ವಿವಾಹವಾದರು. ಇವರಿಗೆ ಮಕ್ಕಳು ಇಲ್ಲ. 2005ರಲ್ಲಿ ನಿಕ್ಕಿ ಅವರಿಗೂ ಕಬೀರ್‌ ಬೇಡಿ ವಿಚ್ಛೇದನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.