ADVERTISEMENT

ಕರುಣಾಕರ ರೆಡ್ಡಿಯ ತನಿಖೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:30 IST
Last Updated 16 ಸೆಪ್ಟೆಂಬರ್ 2011, 19:30 IST

ಹೈದರಾಬಾದ್: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನರೆಡ್ಡಿ ಮತ್ತು ಅವರ ಬಾವ ಬಿ.ವಿ. ಶ್ರೀನಿವಾಸರೆಡ್ಡಿ ಅವರನ್ನು ಪ್ರಶ್ನಿಸುತ್ತಿರುವ ಸಿಬಿಐ, ಶುಕ್ರವಾರ ಮಾಜಿ ಸಚಿವ ಗಾಲಿ ಕರುಣಾಕರ ರೆಡ್ಡಿ ಅವರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿತು.

ಇಲ್ಲಿನ ಸಿಬಿಐ ಕಚೇರಿಗೆ ಶುಕ್ರವಾರ ಬೆಳಿಗ್ಗೆ ಹಾಜರಾದ ಕರುಣಾಕರ ರೆಡ್ಡಿ ಅವರನ್ನು ಸಿಬಿಐ ಅಧಿಕಾರಿಗಳು 10 ಗಂಟೆಗಳ ಕಾಲ ವಿಚಾರಣೆಗೆ ಗುರಿಪಡಿಸಿದರು.

ಈ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕರುಣಾಕರ ರೆಡ್ಡಿ, `ಈ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. 2004ರಲ್ಲೇ ನಾನು ಓಬಳಾಪುರಂ ಮೈನಿಂಗ್ ಕಂಪೆನಿ ನಿರ್ದೇಶಕ ಸ್ಥಾನವನ್ನು ತೊರೆದಿದ್ದೇನೆ. ಸಿಬಿಐ ನೋಟಿಸ್ ಜಾರಿ ಮಾಡಿದ್ದರಿಂದ ವಿಚಾರಣೆಗೆ ಹಾಜರಾದೆ~ ಎಂದರು.  ವಿಚಾರಣಾ ಅಧಿಕಾರಿಗಳು ಗುರುವಾರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರನ್ನು ಪ್ರಶ್ನಿಸಿದ್ದರು.

ತುಟಿ ಬಿಚ್ಚದ ಜನಾರ್ದನ ರೆಡ್ಡಿ: ಸಿಬಿಐ ಎಷ್ಟೇ ಪ್ರಶ್ನಿಸಿದರೂ ಸಹ ರೆಡ್ಡಿದ್ವಯರು ತುಟಿ ಬಿಚ್ಚುತ್ತಿಲ್ಲ. ಇದು ಸಿಬಿಐಗೆ ತಲೆನೋವಾಗಿ ಪರಿಣಮಿಸಿದೆ.

ಇನ್ನು ಎರಡು ದಿನಗಳಲ್ಲಿ ಸಿಬಿಐ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕಾಗಿದ್ದು, ಅಷ್ಟರಲ್ಲಿ ಅವರಿಂದ ಸಾಧ್ಯವಾದಷ್ಟು ಮಾಹಿತಿ ಪಡೆಯಲು ಯತ್ನಿಸುತ್ತಿದೆ.

ವಿಚಾರಣಾ ಅಧಿಕಾರಿಗಳು ಕೇಳುವ ಪ್ರಶೆಗೆ ಜನಾರ್ದನರೆಡ್ಡಿ ಯಾವುದೇ ಉತ್ತರ ನೀಡುತ್ತಿಲ್ಲ. ಅತ್ತ ಶ್ರೀನಿವಾಸ ರೆಡ್ಡಿ ತನಗೆ ಮರೆಗುಳಿ ರೋಗ ಇದ್ದು, ಕೇಳಿದ ಪ್ರಶ್ನೆಗಳಿಗೆ `ನೆನಪಿಲ್ಲ~ ಎನ್ನುವ ಉತ್ತರವನ್ನು ನೀಡುತ್ತಿದ್ದಾರೆ.

ಓಬಳಾಪುರಂ ಗಣಿ ಪ್ರದೇಶದ ನಕ್ಷೆಯನ್ನು ತೋರಿಸಿದರೂ ಸಹ, ತನಗೆ ಯಾವುದೇ ನೆನಪಿಲ್ಲ ಎನ್ನುವ ಉತ್ತರವನ್ನು ಶ್ರೀನಿವಾರೆಡ್ಡಿ ನೀಡುತ್ತಿದ್ದಾರೆ.

ಸಿಬಿಐ ಜಂಟಿ ನಿರ್ದೇಶಕ ಲಕ್ಷ್ಮಿನಾರಾಯಣ ಮತ್ತು ಎಸ್ಪಿ ವೆಂಕಟೇಶ್ ಅವರು ಕೇಳುವ ಪ್ರಶ್ನೆಗಳಿಗೆ ಜನಾರ್ದನ ರೆಡ್ಡಿ ನೇರ ಉತ್ತರ ನೀಡುತ್ತಿಲ್ಲ. ಅಕ್ರಮ ಗಣಿಗಾರಿಕೆಯಲ್ಲಿ ಸಹಕರಿಸಿದ ಸರ್ಕಾರಿ ಅಧಿಕಾರಿಗಳು ಹಾಗೂ ಮುಖಂಡರ ಹೆಸರು ತಿಳಿದುಕೊಳ್ಳಲು ವಿಚಾರಣಾ ಅಧಿಕಾರಿಗಳು ಮಾಡಿದ ಯತ್ನ ಫಲ ನೀಡುತ್ತಿಲ್ಲ.

ವಿಚಾರಣೆಗೆ ಸಹಕರಿಸದಿದ್ದರೆ ಇಬ್ಬರನ್ನೂ ಮಂಪರು ಪರೀಕ್ಷೆಗೆ ಒಳಪಡಿಸುವುದು ಸಿಬಿಐಗೆ ಅನಿವಾರ್ಯವಾಗಲಿದೆ. ಜತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಜಿ ನಿರ್ದೇಶಕ ವಿ.ಡಿ.ರಾಜಗೋಪಾಲ್ ಅವರನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.

ಸೌಲಭ್ಯ ಒದಗಿಸಲು ಸೂಚನೆ: ಈ ನಡುವೆ ಸಿಬಿಐ ವಿಶೇಷ ನ್ಯಾಯಾಲಯ ರೆಡ್ಡಿದ್ವಯರಿಗೆ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ವಿಚಾರಣಾ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಇಬ್ಬರಿಗೂ ಕನಿಷ್ಠ ಸೌಲಭ್ಯವನ್ನು ವಿಚಾರಣಾ ಅಧಿಕಾರಿಗಳು ನೀಡುತ್ತಿಲ್ಲ ಎಂದು ಜನಾರ್ದನರೆಡ್ಡಿ ಪರ ವಕೀಲರು ಗುರುವಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಕಲ್ಪಿಸಲು ಸೂಚಿಸುವಂತೆ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.