ADVERTISEMENT

ಕರ್ನಾಟಕ ಡಿಜಿಪಿ ವಿರುದ್ಧ ಹಕ್ಕುಚ್ಯುತಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ಮುಂಬೈ (ಪಿಟಿಐ): ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್. ಪಾಟೀಲ್ ವಿರುದ್ಧ ಕರ್ನಾಟಕ ಪೊಲೀಸರು ಎಫ್‌ಐಆರ್ ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಎನ್‌ಸಿಪಿ ಶಾಸಕ ಶಶಿಕಾಂತ್ ಶಿಂಧೆ ಅವರು ರಾಜ್ಯ ವಿಧಾನಸಭೆಯಲ್ಲಿ ಕರ್ನಾಟಕ ಡಿಜಿಪಿ ವಿರುದ್ಧ ಗುರುವಾರ ಹಕ್ಕುಚ್ಯುತಿ ಮಂಡಿಸಿದ್ದಾರೆ.

ಸದನದಲ್ಲಿ ಮಾತನಾಡಿದ ಅವರು, `ಗೃಹ ಸಚಿವರ ವಿರುದ್ಧ ನೆರೆಯ ರಾಜ್ಯವು ದುರುದ್ದೇಶದಿಂದ ಪ್ರಕರಣ ದಾಖಲಿಸಿದೆ' ಎಂದು ಟೀಕಿಸಿದ್ದಾರೆ.  ಪಾಟೀಲ್ ಅವರು ದ್ವೇಷ ಪ್ರಚೋದಿಸುವಂತಹ ಭಾಷಣ ಮಾಡಿದ್ದರೆಂಬ ಆಪಾದನೆ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆದರೆ, ಅವರು ಸಾರ್ವಜನಿಕವಾಗಿ ಈ ಭಾಷಣ ಮಾಡಿಲ್ಲ. ಬೆಳಗಾವಿಯಲ್ಲಿರುವ ಮರಾಠಿಗರ ಹಕ್ಕು ಕಾಯ್ದುಕೊಳ್ಳುವ ಬಗ್ಗೆ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು' ಎಂದಿದ್ದಾರೆ.

ಇದು ಹೇಗೆ ಗುಂಪುಗಳ ನಡುವೆ ದ್ವೇಷ ಉದ್ದೀಪಿಸುತ್ತದೆ. ಸಮುದಾಯಗಳ ನಡುವಿನ ಸೌಹಾರ್ದವನ್ನು ಕದಡುತ್ತದೆ' ಎಂದು ಪ್ರಶ್ನಿಸಿ ಜನಪ್ರತಿನಿಧಿ ಕಾಯ್ದೆಯಡಿಯಲ್ಲಿ ಅವರು ಈ ನೋಟಿಸ್ ಮಂಡಿಸಿದ್ದಾರೆ.

`ಬೆಳಗಾವಿ ನಗರಪಾಲಿಕೆ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿರುವುದರಿಂದ ಕರ್ನಾಟಕಕ್ಕೆ ಮುಖಭಂಗವಾಗಿದೆ. ಜೊತೆಗೆ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲೂ ಮರಾಠಿ ಭಾಷಿಗರು ತಮ್ಮ ಶಕ್ತಿಯನ್ನು ತೋರಬಹುದೆಂದು ಕರ್ನಾಟಕ ಹೆದರಿಕೊಂಡಿದೆ' ಎಂದು ಅವರು ಮೂದಲಿಸಿದ್ದಾರೆ.

ಹಿನ್ನೆಲೆ: ಬೆಳಗಾವಿಯಲ್ಲಿ ಭಾಷಣ ಮಾಡಿದ ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್. ಪಾಟೀಲ್, ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವಂತಹ ನುಡಿಗಳನ್ನಾಡಿದ್ದಾರೆಂಬ ಆಪಾದನೆ ಮೇಲೆ ಅವರ ವಿರುದ್ಧ ಏಪ್ರಿಲ್ 19ರಂದು ಎಫ್‌ಐಆರ್ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.