ಭುವನೇಶ್ವರ: ಒಡಿಶಾದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಮಹೇಶ್ವರ ಮೊಹಾಂತಿ ಅವರ ಹತ್ಯೆ ಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಆಂಧ್ರಪ್ರದೇಶ ಪೊಲೀಸರ ನೆರವಿನಿಂದ ನಾಲ್ವರು ಆರೋಪಿಗಳನ್ನು ಪುಟ್ಟಪರ್ತಿಯಲ್ಲಿ ಬಂಧಿಸಲಾಗಿದೆ.
ಬಿಜೆಡಿ ಮುಖಂಡರಾದ ಮೊಹಾಂತಿ ಮೇಲೆ ದುಷ್ಕರ್ಮಿಗಳು ಫೆಬ್ರುವರಿ 21ರಂದು ಪುರಿಯಲ್ಲಿ ಗುಂಡಿನ ದಾಳಿ ನಡೆಸಿ ಅವರ ಹತ್ಯೆಗೆ ಯತ್ನಿಸಿದ್ದರು. ಸದ್ಯ ಅವರು ಭುವನೇಶ್ವರದ ಖಾಸಗಿ ಆಸ್ಪತ್ರಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಐವರನ್ನು ಬಂಧಿಸಿದ್ದೇವೆ. ಇವರಲ್ಲಿ ನಾಲ್ವರನ್ನು ಕರ್ನಾಟಕ, ಆಂಧ್ರ ಪೊಲೀಸರ ನೆರವಿನೊಂದಿಗೆ ಪುಟ್ಟಪರ್ತಿಯಲ್ಲಿ ಬಂಧಿಸಲಾಗಿದೆ’ ಎಂದು ಪುರಿಯ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಕುಮಾರ್ ಸಾಹು ತಿಳಿಸಿದ್ದಾರೆ.
‘ಸಚಿವರ ಮೇಲೆ ದಾಳಿ ನಡೆಸಿ ನಾಲ್ವರು ಪುಟ್ಟಪರ್ತಿಗೆ ಪರಾರಿಯಾಗಿದ್ದರು. ಇವರಲ್ಲಿ ಇಬ್ಬರು ಬೆಂಗಳೂರಿಗೆ ಹೋಗಿದ್ದರು. ಇವರು ಬೆಂಗಳೂರಿನಿಂದ ಹಿಂದಿರುಗಿದ ನಂತರ ಪುಟ್ಟಪರ್ತಿಯಲ್ಲಿ ತಂಗಿದ್ದ ರಾಜ್ಯದ ಪೊಲೀಸ್ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿತು. ಆರೋಪಿಗಳ ಮೊಬೈಲ್ ಫೋನ್‌ಗಳ ಮೂಲಕ ನಾವು ಅವರ ಮೇಲೆ ನಿಗಾ ಇಟ್ಟಿದ್ದೆವು’ ಎಂದು ಸಾಹು ಹೇಳಿದ್ದಾರೆ.
‘ಆದರೆ, ದುಷ್ಕೃತ್ಯದ ಸೂತ್ರಧಾರನನ್ನು ಇನ್ನೂ ಬಂಧಿಸಲಾಗಿಲ್ಲ. ಅವನ ಗುರುತು ಪತ್ತೆಯಾಗಿದ್ದು, ಶೀಘ್ರದಲ್ಲಿ ಆತನನ್ನೂ ಬಂಧಿಸಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.