ADVERTISEMENT

ಕರ್ಮಪರನ್ನು ದೋಷ ಮುಕ್ತಗೊಳಿಸಿದ ಹಿಮಾಚಲ ಸರ್ಕಾರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST

ಶಿಮ್ಲಾ (ಪಿಟಿಐ/ಐಎಎನ್‌ಎಸ್): 17ನೇ ಕರ್ಮಪ ಒಜೈನ್ ತ್ರಿನ್ಲೆ ದೋರ್ಜಿ ಅವರು ಯಾವುದೇ ಹಣಕಾಸು ಅವ್ಯವಹಾರಗಳಲ್ಲಿ ಭಾಗಿಯಾಗಿಲ್ಲ ಎಂದು ಶುಕ್ರವಾರ ಹಿಮಾಚಲ ಪ್ರದೇಶ ಸರ್ಕಾರ ಕರ್ಮಪ ಅವರನ್ನು ಆರೋಪದಿಂದ ಸಂಪೂರ್ಣ ಮುಕ್ತ ಮಾಡಿದೆ ಅಲ್ಲದೆ ಅವರ ವಿರುದ್ಧ ಯಾವುದೇ ಕ್ರಮದ ಸಾಧ್ಯತೆಯನ್ನೂ ತಳ್ಳಿ ಹಾಕಿದೆ.

‘ಯಾವುದೇ ಆರ್ಥಿಕ ಅವ್ಯವಹಾರದಲ್ಲಿ ಕರ್ಮಪ  ಭಾಗಿಯಾಗಿಲ್ಲ. ಭಕ್ತರಿಂದ ಹಲವು ದೇಣಿಗೆಗಳು ಬಂದಿವೆ  ಮತ್ತು ಕರ್ಮಪ ಅವರಿಗೂ ಇದಕ್ಕೂ ಸಂಬಂಧವಿಲ್ಲ. ಬೌದ್ಧವಿಹಾರದ ಟ್ರಸ್ಟಿಗಳು ಈ ವ್ಯವಹಾರಗಳನ್ನು ನಿರ್ವಹಿಸುತ್ತಾರೆ’ ಎಂದು ಮುಖ್ಯ ಕಾರ್ಯದರ್ಶಿ ರಜ್ವಂತ್ ಸಂಧು ಇಲ್ಲಿ ವರದಿಗಾರರಿಗೆ ತಿಳಿಸಿದರು.

ಪೊಲೀಸರು ಜ. 28ರಂದು ಸುಮಾರು ರೂ 7.5 ಕೋಟಿ ಮೊತ್ತದ  ವಿದೇಶಿ ಮತ್ತು ಭಾರತೀಯ ಹಣವನ್ನು ಕರ್ಮಪ ಲಾಮಾ ಅವರ ವಿಹಾರದಿಂದ ಮತ್ತು ಧರ್ಮಶಾಲಾ ಬಳಿಯ ಬೌದ್ಧವಿಹಾರದಿಂದ  ವಶಪಡಿಸಿಕೊಂಡಿದ್ದರು.

ADVERTISEMENT

‘ಕರ್ಮಪ ಅವರು ಧಾರ್ಮಿಕ ಮುಖಂಡ. ವಿಶ್ವದಾದ್ಯಂತ ಇವರಿಗೆ ಅನುಯಾಯಿಗಳಿದ್ದಾರೆ. ಅವರ ಧಾರ್ಮಿಕ ಚಟುವಟಿಕೆಗಳನ್ನು ನಾವು ಗೌರವಿಸುತ್ತೇವೆ. ಯಾವುದೇ ಧಾರ್ಮಿಕ ವ್ಯವಹಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಸಂಧು ಹೇಳಿದರು.

‘ವಶಪಡಿಸಿಕೊಳ್ಳಲಾದ ಹಣ ಎಲ್ಲಿಂದ ಬಂತು, ಅದರ ಮೂಲ ಏನು ಮತ್ತು ಯಾವ ಉದ್ದೇಶಕ್ಕಾಗಿ ಅದನ್ನು ಅಲ್ಲಿ ಇಡಲಾಗಿತ್ತು ಎಂಬ ಬಗ್ಗೆ ಪೊಲೀಸರು ಇನ್ನೂ ವಿಚಾರಣೆ ನಡೆಸುತ್ತಿದ್ದಾರೆ’ ಎಂದರು.

ಕರ್ಮಪ ಅವರ ಸಹಾಯಕ ಶಕ್ತಿ ಲಾಮಾ ಎಂದು ಕರೆಸಿಕೊಳ್ಳುವ ರುಬ್ಗಿ ಚೋಸಾಂಗ್ ಸೇರಿದಂತೆ ಏಳು ಮಂದಿ ಪೊಲೀಸರ ವಶದಲ್ಲಿದ್ದಾರೆ. ಧರ್ಮಶಾಲಾದಲ್ಲಿ ‘ಅಕ್ರಮ’ ಭೂ ವ್ಯವಹಾರಕ್ಕೆ ಈ ಹಣ ಸಂಗ್ರಹಿಸಲಾಗಿತ್ತು. ಕರ್ಮಪ ಸಹಾಯಕ ಶಕ್ತಿ ಲಾಮಾ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಈಗಲೂ ನಂಬಿದ್ದಾರೆ.

‘ಗಡಿಪಾರಾದವರು ರಾಜ್ಯದುದ್ದಕ್ಕೂ  ವಶಪಡಿಸಿಕೊಂಡ ‘ಬೇನಾಮಿ’ ಆಸ್ತಿಗಳ ಬಗ್ಗೆ ತಿಳಿಯಲು ಸರ್ಕಾರ ಸಮೀಕ್ಷೆ ನಡೆಸುತ್ತಿದೆ. ಗಡಿಪಾರಿಗೆ ಒಳಗಾದವರು ಸೇರಿದಂತೆ ಎಲ್ಲರಿಗೂ ಕಾನೂನು ಒಂದೇ’ ಎಂದು ಸಂಧು ತಿಳಿಸಿದರು.

ಆದರೆ, ಟಿಬೆಟನ್ನರ ಅಕ್ರಮ ಭೂ ವ್ಯವಹಾರಗಳ ಬಗ್ಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಕ್ತವಾಗಿದೆ ಎಂದು ಈಗಾಗಲೇ ದೇಶಾಂತರ ಸರ್ಕಾರ ಸ್ಪಷ್ಟ ಪಡಿಸಿದೆ. ಜನವರಿ 25ರಂದು ಪೊಲೀಸರು ಧರ್ಮಶಾಲಾ ಬಳಿಯ ಕರ್ಮಪ ಅವರ ಬಿಡಾರಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ಚೀನಾ ಸೇರಿದಂತೆ 25 ರಾಷ್ಟ್ರಗಳಿಗೆ ಸೇರಿದ ಒಟ್ಟು ರೂ. 7.5 ಕೋಟಿ ಮೊತ್ತದ ವಿದೇಶಿ ಹಣವನ್ನು ವಶಪಡಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.