ADVERTISEMENT

ಕಲಾಪದಲ್ಲಿ ಪಾಲ್ಗೊಳ್ಳುವಿಕೆ ಸಂಸದರ ಕರ್ತವ್ಯ: ಪ್ರಧಾನಿ ಮೋದಿ ಕಟುನುಡಿ

ಪಿಟಿಐ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ನವದೆಹಲಿ: ಸಂಸತ್ತಿನ ಕಾರ್ಯನಿರ್ವಹಣೆ ವಿಳಂಬವಾಗಲು ಕಾರಣವಾಗುವ ಕೋರಂ ಕೊರತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
 
ಯಾವುದೇ ಸಂದರ್ಭದಲ್ಲಿ ಯಾವುದೇ ಸಂಸದರನ್ನು ತಾನು ಕರೆದು ಮಾತನಾಡಿಸಬಹುದು. ಹಾಗಾಗಿ ಬಿಜೆಪಿಯ ಎಲ್ಲ ಸಂಸದರು ಸಂಸತ್ತಿನಲ್ಲಿ ಇರಬೇಕು ಎಂದು ಪ್ರಧಾನಿ ಹೇಳಿದ್ದಾರೆ. 
 
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಮೋದಿ ಅವರು, ಸಂಸತ್‌ ಕಲಾಪಕ್ಕೆ ಹಾಜರಾಗುವುದು ಸಂಸದರ ಮೂಲ ಹೊಣೆಗಾರಿಕೆ ಎಂದರು. 
ಹಲವು ಕೆಲಸಗಳನ್ನು ತಾನು ಮಾಡಬಲ್ಲೆ. ಆದರೆ ಸಂಸದರ ಪರವಾಗಿ ಕಲಾಪಕ್ಕೆ ಹಾಜರಾಗುವುದು ಸಾಧ್ಯವಿಲ್ಲ ಎಂದು ಅವರು ಖಾರವಾಗಿ ಹೇಳಿದರು. 
 
ಸಂಸತ್ತಿನ ಎರಡೂ ಸದನಗಳಲ್ಲಿ ಕೋರಂ ಕೊರತೆಯಾಗುತ್ತಿರುವುದನ್ನು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್‌ ಪ್ರಸ್ತಾಪಿಸಿದರು. ಸೋಮವಾರವೂ ಕೋರಂ ಇಲ್ಲದಿದ್ದುದನ್ನು ಅವರು ಉಲ್ಲೇಖಿಸಿದರು. 
 
ಆಗ ಮಾತನಾಡಿದ ಮೋದಿ ಅವರು, ಸಂಸತ್ತಿನಲ್ಲಿ ಹಾಜರಿರಬೇಕು ಎಂದು ಹೇಳುತ್ತಿರುವುದು ಸಂಸದರಲ್ಲಿ ಮಾಡಿಕೊಳ್ಳುತ್ತಿರುವ ವಿನಂತಿ ಅಲ್ಲ. ಕಲಾಪದಲ್ಲಿ ಭಾಗವಹಿಸುವುದು ಅವರ ಕರ್ತವ್ಯ ಎಂದು ಹೇಳಿದರು. 
 
ಸಂಸತ್ತಿನಲ್ಲಿ ಬಿಜೆಪಿ ಸಂಸದರು ಇರಬೇಕು ಎಂದು ಪ್ರಧಾನಿ ಹಿಂದೆಯೂ ಹೇಳಿದ್ದರು. ಆದರೆ ಈ ಬಗ್ಗೆ ಇಷ್ಟು ಕಠಿಣವಾಗಿ ಅವರು ಮಾತನಾಡಿದ್ದು ಇದೇ ಮೊದಲು. 
 
ಆರ್‌ಎಸ್‌ಎಸ್‌ ಪದಾಧಿಕಾರಿಯೊಬ್ಬರು ಹಿಂದೆ ಹೇಳಿದ್ದರನ್ನು ಪ್ರಧಾನಿ ಉಲ್ಲೇಖಿಸಿದರು. ಸಂಘಟನೆಯು ದೇಶದ ಉದ್ದಗಲಕ್ಕೂ ಬೆಳೆದಿದೆ. ಸದಸ್ಯರಿಗೆ ಮಾಡುವುದಕ್ಕೆ ಸಾಕಷ್ಟು ಕೆಲಸವೂ ಇದೆ. ಆದರೆ ಶಾಖೆಗೆ ಬರಲು ಮಾತ್ರ ಯಾರಿಗೂ ಸಮಯ ಇಲ್ಲ ಎಂದು ಆರ್‌ಎಸ್‌ಎಸ್‌ ಪದಾಧಿಕಾರಿಯೊಬ್ಬರು ಹಿಂದೆ  ಹೇಳಿದ್ದನ್ನು ಪ್ರಧಾನಿ ನೆನಪಿಸಿಕೊಂಡರು.
 
ಅದೇ ರೀತಿ ಸಂಸದರಿಗೂ ಮಾಡುವುದಕ್ಕೆ ಸಾಕಷ್ಟು ಕೆಲಸಗಳಿರುತ್ತವೆ. ಆದರೆ ಸಂಸತ್ತಿಗೆ ಬರುವುದಕ್ಕೆ ಸಮಯ ಇರುವುದಿಲ್ಲ. ಹಾಗಾಗಬಾರದು ಎಂದು ಮೋದಿ ಹೇಳಿದರು. 
 
**
ಸಂಸದರು ತಮ್ಮ ಕ್ಷೇತ್ರದ ಲಕ್ಷಾಂತರ ಜನರ ಪ್ರತಿನಿಧಿಯಾಗಿರುತ್ತಾರೆ. ಹಾಗಾಗಿ ಕಲಾಪದಲ್ಲಿ ಭಾಗಿಯಾಗುವುದು ಅವರ ಮುಖ್ಯ ಕೆಲಸ.
ನರೇಂದ್ರ ಮೋದಿ,  ಪ್ರಧಾನಿ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.