ADVERTISEMENT

ಕಲಿಕಾ ಅವಧಿ ಇಳಿಕೆ: ಯುಜಿಸಿ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ನವದೆಹಲಿ: ಉನ್ನತ ಕಾನೂನು ಶಿಕ್ಷಣ ಕಲಿಕೆಯಲ್ಲಿ ಏಕರೂಪತೆ ಮತ್ತು ಗುಣಮಟ್ಟವನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ತರುವ ಉದ್ದೇಶದಿಂದ ಎರಡು ವರ್ಷಗಳ ಸ್ನಾತಕೋತ್ತರ ಕಾನೂನು ಪದವಿಯ (ಎಲ್.ಎಲ್.ಎಂ) ಕಲಿಕಾ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಬೇಕು ಎಂಬ ಪ್ರಸ್ತಾವಕ್ಕೆ ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ತಾತ್ವಿಕ ಒಪ್ಪಿಗೆ ನೀಡಿದೆ.

ಈ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ನೇಮಕ ಮಾಡಿದ್ದ ತಜ್ಞರ ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ, ಎರಡು ವರ್ಷಗಳ ಎಲ್.ಎಲ್.ಎಂ ಅವಧಿಯನ್ನು ಒಂದು ವರ್ಷದ ಅವಧಿಗೆ ಇಳಿಸಲು ಶಿಫಾರಸು ಮಾಡಿದೆ.

ಈ ಹಿನ್ನೆಲೆಯಲ್ಲಿ ಯುಜಿಸಿ, ಒಂದು ವರ್ಷದ ಸ್ನಾತಕೋತ್ತರ ಪದವಿಗೆ ಸೂಕ್ತವಾದ ಹೊಸ ಪಠ್ಯಕ್ರಮವನ್ನು ಸಿದ್ಧಪಡಿಸಲು ಮೂವರು ತಜ್ಞರ ತಂಡವನ್ನು ರಚಿಸಲು ಯೋಚಿಸಿದೆ. ಕೇವಲ ಸೂಚ್ಯವಾಗಿರುವ ಈ ಪಠ್ಯಕ್ರಮದ ಆಯ್ಕೆ, ಬದಲಾವಣೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಆಯಾಯ ವಿಶ್ವವಿದ್ಯಾಲಯಗಳಿಗೆ ನೀಡಲಾಗಿದೆ. ದೇಶದಲ್ಲಿ ಒಟ್ಟು 200 ವಿಶ್ವವಿದ್ಯಾಲಯಗಳು ಎಲ್.ಎಲ್.ಎಂ ಕೋರ್ಸ್ ನಡೆಸುತ್ತಿವೆ ಎಂದು ಯುಜಿಸಿ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.


ಅಮೆರಿಕ, ಇಂಗ್ಲೆಂಡ್ ವಿಶ್ವವಿದ್ಯಾಲಯಗಳಲ್ಲಿನ ಈ ಪದ್ಧತಿಯನ್ನು ಅನುಸರಿಸುವಂತೆ ರಾಷ್ಟ್ರೀಯ ಜ್ಞಾನ ಆಯೋಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು. ಎಲ್.ಎಲ್.ಎಂ ಅವಧಿಯನ್ನು ಕಡಿತಗೊಳಿಸುವ ತೀರ್ಮಾನ ತೆಗೆದುಕೊಳ್ಳುವುದಕ್ಕೂ ಮುನ್ನ ಸಚಿವಾಲಯ ಕಾನೂನು ಶಿಕ್ಷಣ ತಜ್ಞರು ಸೇರಿದಂತೆ ಸಂಬಂಧಿಸಿದವರ ಜತೆ ಹಲವು ಸುತ್ತಿನ ಚರ್ಚೆ ನಡೆಸಿದೆ.

ಎಲ್ಲರಿಂದಲೂ ಸಮ್ಮತಿ ದೊರೆತ ಬಳಿಕ ಈ ನಿರ್ಧಾರ ತೆಗೆದುಕೊಂಡಿದೆ. ಆದರೆ, ಇದಕ್ಕಾಗಿ ಯುಜಿಸಿ ತನ್ನ 2003ರ ನಿಯಮಾವಳಿಗೆ ತಿದ್ದುಪಡಿ ತರಲು ಸಜ್ಜಾಗಿದೆ. ವಿಶ್ವದಾದ್ಯಂತ ಸ್ನಾತಕೋತ್ತರ ಕಾನೂನು ಪದವಿಯ ಕಲಿಕಾ ಅವಧಿ ಒಂದು ವರ್ಷ. ಅರೆಕಾಲಿಕ ವಿದ್ಯಾರ್ಥಿಗಳು ಮಾತ್ರ ಎರಡು ವರ್ಷಗಳ ಸ್ನಾತಕೋತ್ತರ ಪದವಿಗೆ ಸೇರುತ್ತಾರೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.