ADVERTISEMENT

ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಎಡವಟ್ಟು

ಸುಪ್ರೀಂಕೋರ್ಟ್‌ ಮುಂದೆ ತಪ್ಪೊಪ್ಪಿಕೊಂಡ ಕೇಂದ್ರ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 19:30 IST
Last Updated 9 ಜನವರಿ 2014, 19:30 IST
ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಎಡವಟ್ಟು
ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಎಡವಟ್ಟು   

ನವದೆಹಲಿ ಪಿಟಿಐ): ‘ಕಲ್ಲಿದ್ದಲು ನಿಕ್ಷೇಪ ಹಂಚಿಕೆ­ಯಲ್ಲಿ ಏನೋ ಎಡವಟ್ಟಾಗಿದೆ’  ಎಂದು ಕೇಂದ್ರವು ಇದೇ ಮೊದಲ ಬಾರಿ ಸುಪ್ರೀಂಕೋರ್ಟ್‌ ಮುಂದೆ ತಪ್ಪೊಪ್ಪಿಕೊಂಡಿದೆ.

‘ಹಂಚಿಕೆಗೆ ಮುನ್ನ ಸಾಕಷ್ಟು ಪರಿಶೀಲನೆ ನಡೆಸ­ಬಹುದಿತ್ತು’ ಎಂದೂ ಅದು ಹೇಳಿದೆ.

‘ನಾವು ವಿಶ್ವಾಸದಿಂದಲೇ ಹಂಚಿಕೆ ನಿರ್ಧಾರ ತೆಗೆದುಕೊಂಡಿದ್ದೆವು. ಆದರೆ ಏನೋ ಲೋಪವಾಗಿದೆ. ಅದನ್ನು ಸರಿಪಡಿಸಬೇಕಾಗಿದೆ’ ಎಂದು ಅಟಾರ್ನಿ ಜನರಲ್‌ ಜಿ.ಇ.ವಾಹನ್ವತಿ ಕೋರ್ಟ್‌ಗೆ ಗುರುವಾರ ಮನವರಿಕೆ ಮಾಡಿಕೊಟ್ಟರು.

ಕೆಲವೊಂದು ಹಂಚಿಕೆ ರದ್ದುಮಾಡುವ ವಿಷಯ­ದಲ್ಲಿ ಕೇಂದ್ರ ಯಾವ ನಿಲುವು ತಳೆದಿದೆ ಎಂದು ಪೀಠ ಕೇಳಿದಾಗ,  ‘ಸರ್ಕಾರ ಮುಂದಿನ ವಾರ ತನ್ನ ನಿಲುವು ಸ್ಪಷ್ಟಪಡಿಸಲಿದೆ’ ಎಂದರು.

ವಾಪಸ್‌ ಪಡೆಯುವ ಚಿಂತನೆ: ‘ಖಾಸಗಿ ಕಂಪೆನಿಗಳಿಗೆ  2006ರ ನಂತರ ಮಾಡಿದ ಕಲ್ಲಿದ್ದಲು ನಿಕ್ಷೇಪ ಹಂಚಿಕೆಗಳನ್ನು ವಾಪಸ್‌್ ಪಡೆಯುವ ನಿಟ್ಟಿನಲ್ಲಿಯೂ ಸರ್ಕಾರ ಆಲೋಚಿಸುತ್ತಿದೆ’ ಎಂದೂ  ತಿಳಿಸಿದರು.

2006ರ ನಂತರ ಮಾಡಿದ ಹಂಚಿಕೆಗಳನ್ನು ರದ್ದುಮಾಡಬೇಕೆಂದು ಕೋರಿ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಬುಧವಾರ ಇದರ ವಿಚಾರಣೆ ನಡೆಸಿದ್ದ ಕೋರ್ಟ್‌, ‘ಹಂಚಿಕೆ ರದ್ದು ಸಾಧ್ಯವೇ’ ಎಂದು ಕೇಳಿತ್ತು.

‘ನಿಯಮಗಳನ್ನು ಗಾಳಿಗೆ ತೂರಿ ನಿಕ್ಷೇಪ ಹಂಚಿಕೆ ಮಾಡಲಾಗಿದೆ. ಹಾಗಾಗಿ ಇದನ್ನು ರದ್ದು­ಪಡಿಸಬೇಕು’ ಎಂದು ಕೋರಿ ಸುಪ್ರೀಂ­ಕೋರ್ಟ್‌ಗೆ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ಪೀಠ 1993ರಿಂದ ಮಾಡಿದ ಹಂಚಿಕೆಗಳನ್ನು ಪರಾಮರ್ಶಿಸುತ್ತಿದೆ.

ಪ್ರಧಾನಿ ರಾಜೀನಾಮೆಗೆ ಪಟ್ಟು: ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಎಡವಟ್ಟಾಗಿದೆ ಎಂದು ವಾಹನ್ವತಿ ಅವರು ಒಪ್ಪಿಕೊಂಡಿದ್ದೇ ತಡ ಪ್ರಧಾನಿ ಮನಮೋಹನ್‌ ಸಿಂಗ್‌ ರಾಜೀನಾಮೆಗೆ ಬಿಜೆಪಿ ಮತ್ತೆ ಪಟ್ಟು ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.