ADVERTISEMENT

ಕಲ್ಲಿದ್ದಲು ಹಗರಣ: ಪ್ರಧಾನಿ ಸಲಹೆಗಾರ ನಾಯರ್ ಗೆ ಸಿಬಿಐ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 12:47 IST
Last Updated 22 ಮಾರ್ಚ್ 2014, 12:47 IST

ನವದೆಹಲಿ (ಪಿಟಿಐ):  ಕಲ್ಲಿದ್ದಲು ಸಚಿವಾಲಯದ ಪರಿಶೀಲನಾ ಸಮಿತಿ ತಿರಸ್ಕರಿಸಿದ ಬಳಿಕವೂ ತಲಬೀರಾದಲ್ಲಿನ ಕಲ್ಲಿದ್ದಲು ನಿಕ್ಷೇಪವನ್ನು ಹಿಂಡಾಲ್ಕೋ ಕಂಪೆನಿಗೆ ಮಂಜೂರು ಮಾಡಿದ್ದೂ ಸೇರಿದಂತೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿನ ಅಕ್ರಮ ಆಪಾದನೆಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆಗಾರ ಟಿ.ಕೆ.ಎ. ನಾಯರ್ ಅವರನ್ನು ಸಿಬಿಐ ಪ್ರಶ್ನಿಸಿದೆ.

ಮುಂದಿನ ವಾರ ಸುಪ್ರೀಕೋರ್ಟ್ ಗೆ ತನ್ನ ವರದಿ ಒಪ್ಪಿಸಬೇಕಾದ ಹಿನ್ನೆಲೆಯಲ್ಲಿ ಸಿಬಿಐ ನಾಯರ್ ಅವರಿಗೆ ವಿಸ್ತೃತ ಪ್ರಶ್ನಾವಳಿಯನ್ನು ಕಳುಹಿಸಿದ್ದು, ನಾಯರ್ ಅವರು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

2006ರಿಂದ 2009ರ ನಡುವಣ ಅವಧಿಯಲ್ಲಿ ಕಲ್ಲಿದ್ದಲು ಸಚಿವಾಲಯದ ಉಸ್ತುವಾರಿಯನ್ನು ಪ್ರಧಾನಿಯವರು ಹೊಂದಿದ್ದಾಗ ಅನುಸರಿಸಲಾಗಿದ್ದ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆ ಸಂಬಂಧಿತ ಕಲ್ಲಿದ್ದಲು ನೀತಿ ಕುರಿತ ಪ್ರಶ್ನೆಗಳನ್ನು ನಾಯರ್ ಅವರಿಗೆ ಕೇಳಲಾಗಿತ್ತು ಎಂದು ಮೂಲಗಳು ಹೇಳಿವೆ.

ಕಲ್ಲಿದ್ದಲು ನಿಕ್ಷೇಪಗಳ ಹರಾಜು ವಿಳಂಬ, ಕಣ್ಮರೆಯಾದ ಕಲ್ಲಿದ್ದಲು ಕಡತಗಳು ಮತ್ತು ತಲಬೀರಾ ಕಲ್ಲಿದ್ದಲು ನಿಕ್ಷೇಪವನ್ನು ಹಿಂಡಾಲ್ಕೋ ಕಂಪೆನಿಗೆ ನೀಡಲು ಕಾರಣವಾದ ಘಟನಾವಳಿಗಳ ಬಗ್ಗೆ ಉತ್ತರ ನೀಡುವಂತೆ ನಾಯರ್ ಅವರಿಗೆ ಸೂಚಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಕಲ್ಲಿದ್ದಲು ಇಲಾಖಾ ಕಾರ್ಯದರ್ಶಿ ಪಿ.ಸಿ. ಪ್ರಕಾಶ್ ಮತ್ತು ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಈಗ ನಾಯರ್ ಅವರು ಕಳುಹಿಸಿರುವ ಉತ್ತರಗಳನ್ನು ಸಿಬಿಐ ಸುಪ್ರಿಂಕೋರ್ಟ್ ಗೆ ಸಲ್ಲಿಸಲಿದೆ.

ಸಿಬಿಐ ಈಗಾಗಲೇ ಪ್ರಧಾನ ಮಂತ್ರಿ ಸಚಿವಾಲಯದ ಇಬ್ಬರು ಮಾಜಿ ಅಧಿಕಾರಿಗಳಾದ ವಿನಿ ಮಹಾಜನ್ ಮತ್ತು ಅಶೀಷ್ ಗುಪ್ತಾ ಅವರನ್ನು ವಿಚಾರಣೆಗೆ ಗುರಿಪಡಿಸಿದೆ. ಈ ಇಬ್ಬರು ಅಧಿಕಾರಿಗಳೂ 2006ರಿಂದ 2009ರವರೆಗಿನ ಅವಧಿಯಲ್ಲಿ ಪ್ರಧಾನ ಮಂತ್ರಿ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.