ADVERTISEMENT

ಕಲ್ಲುತೂರಾಟ ಮಾಡುವವರಿಗೆ ಗುಂಡಿಕ್ಕಬೇಕು: ಬಿಜೆಪಿ ಸಂಸದ

ಪಿಟಿಐ
Published 11 ಜೂನ್ 2018, 13:53 IST
Last Updated 11 ಜೂನ್ 2018, 13:53 IST
ಚಿತ್ರ ಕೃಪೆ – ಟ್ವಿಟರ್
ಚಿತ್ರ ಕೃಪೆ – ಟ್ವಿಟರ್   

ಚಂಡೀಗಡ: ಕಾಶ್ಮೀರ ಕಣಿವೆಯಲ್ಲಿ ಕಲ್ಲುತೂರಾಟ ಮಾಡುವವರಿಗೆ ಗುಂಡಿಕ್ಕಬೇಕು ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಡಿ.ಪಿ. ವತ್ಸ್ ಹೇಳಿದ್ದಾರೆ.

ಭಾರತದ ಜತೆ ಪಾಕಿಸ್ತಾನ ಪರೋಕ್ಷ ಯುದ್ಧ ನಡೆಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಸೇನಾಪಡೆಗಳ ಮೇಲೆ ದಿನವೂ ದಾಳಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ವತ್ಸ್ ಅವರು ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ವಿದ್ಯಾಲಯದ ನಿವೃತ್ತ ಕಮಾಂಡೆಂಟ್ ಆಗಿದ್ದಾರೆ.

ADVERTISEMENT

ಕಲ್ಲುತೂರಾಟ ಆರೋಪ ಎದುರಿಸುತ್ತಿರುವವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ನಿರ್ಧರಿಸಿರುವ ಬಗ್ಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದೊಂದಿಗೆ ನೇರವಾಗಿ ನಡೆಸಿದ ಯುದ್ಧಗಳಲ್ಲಿ ಹಲವು ಬಾರಿ ಸೋಲನುಭವಿಸಿದರೂ ಪಾಕಿಸ್ತಾನ ಇನ್ನೂ ಪಾಠ ಕಲಿತಿಲ್ಲ ಎಂದು ಅವರು ಹೇಳಿದ್ದಾರೆ.

ಹೇಳಿಕೆಗೆ ಸಮರ್ಥನೆ: ಕಲ್ಲುತೂರಾಟ ಮಾಡುವವರಿಗೆ ಗುಂಡಿಕ್ಕಬೇಕು ಎಂಬ ತಮ್ಮ ಹೇಳಿಕೆಯನ್ನು ವತ್ಸ್‌ ಅವರು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಪಿಟಿಐ ಸುದ್ದಿ ಸಂಸ್ಥೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಸೇನಾಧಿಕಾರಿಯಾಗಿದ್ದವ. ಪಾಕಿಸ್ತಾನದ ಪರೋಕ್ಷ ಯುದ್ಧದ ವಿರುದ್ಧ ನಮ್ಮ ಸೇನೆ ಕಾಶ್ಮೀರದಲ್ಲಿ ದೀರ್ಘಾವಧಿಯಿಂದಲೂ ಹೋರಾಡುತ್ತಿದೆ. ಈ ಹೋರಾಟ ನಡೆಸುತ್ತಿರುವ ಸೇನೆಯ ನನ್ನ ಯೋಧರು ನನ್ನಿಂದ ಏನನ್ನು ನಿರೀಕ್ಷಿಸುತ್ತಾರೆ? ಅವರ ನೈತಿಕ ಸಾಮರ್ಥ್ಯ ಕುಸಿಯಲು ಅವಕಾಶ ನೀಡುವುದಿಲ್ಲ. ಅವರ ಮೇಲೆ ಕಲ್ಲುತೂರಾಟ ನಡೆಸಲು ಅವಕಾಶ ಕೊಡಲು ಸಾಧ್ಯವಿಲ್ಲ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ’ ಎಂದು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.