ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಎರಡು ಬಾಂಬ್ ಸ್ಫೋಟದ ಘಟನೆಗಳು ಕೇಂದ್ರ ಗೃಹ ಖಾತೆಗೆ ಕಪ್ಪು ಚುಕ್ಕೆ ಎಂದು ಬಣ್ಣಿಸಲಾಗಿತ್ತು. ಆದರೆ ಈಗ 2ಜಿ ತರಂಗಾಂತರ ಹಗರಣದಿಂದಾಗಿ ಗೃಹ ಸಚಿವ ಪಿ.ಚಿದಂಬರಂ ಅವರ ವರ್ಚಸ್ಸೇ ಕುಂದುತ್ತಿದೆ.
26/11ರ ಮುಂಬೈ ದಾಳಿಯ ನಂತರದ ಕ್ಲಿಷ್ಟ ದಿನಗಳಲ್ಲಿ ಶಿವರಾಜ್ ಪಾಟೀಲ್ ಅವರ ಉತ್ತರಾಧಿಕಾರಿಯಾಗಿ ಗೃಹ ಖಾತೆಯನ್ನು ವಹಿಸಿಕೊಂಡ ಚಿದಂಬರಂ, ಇಲಾಖೆಯ ಮೇಲೆ ಹಿಡಿತ ಸಾಧಿಸಿ ಜನಪ್ರಿಯತೆ ಗಳಿಸಿದರು.
ಇಲಾಖೆಯನ್ನು ಬಲಪಡಿಸುವ ಯೋಜನೆಗಳನ್ನು ಪ್ರಕಟಿಸಿ ಕೆಲವನ್ನು ಜಾರಿಗೂ ತಂದರು. ವಿವಿಧ ತನಿಖಾ ಸಂಸ್ಥೆಗಳ ಮಧ್ಯೆ ಮಾಹಿತಿ ವಿನಿಮಯದಲ್ಲಿ ಸಮನ್ವಯವನ್ನು ಮೂಡಿಸಿದರು.
ಈ ಮಧ್ಯೆ ಎಡಪಂಥೀಯ ಉಗ್ರಗಾಮಿಗಳ ಮೇಲೆ ಪದೇ ಪದೇ ವಾಗ್ದಾಳಿ ನಡೆಸಿ ಕಾರ್ಯಾಚರಣೆ ತೀವ್ರಗೊಳಿಸಿದಾಗ ಅವರ ಪಕ್ಷದವರೇ ಮಾವೊವಾದಿಗಳ ಹಾವಳಿ ಹತ್ತಿಕ್ಕಲು ಬಂದೂಕಿಗಿಂತ ಅಭಿವೃದ್ಧಿ ಕಾರ್ಯವೇ ಲೇಸು ಎಂದು ಹೇಳುವ ಮೂಲಕ ಚಿದಂಬರಂ ವಿರುದ್ಧ ಟೀಕೆಗಳನ್ನು ಮಾಡಿದರು.
ಒಂದು ಹಂತದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು, ಚಿದಂಬರಂ ಅವರನ್ನು ಸೊಕ್ಕಿನ ಸ್ವಭಾವದವರು ಎಂದು ಜರಿದರು. ಆಗ ಚಿದಂಬರಂ `ನಾನು ಸೊಕ್ಕಿನವ ಎಂದಾದರೆ ದೇಶದ ಪ್ರಥಮ ಪ್ರಧಾನಿ ನೆಹರು ಅವರನ್ನೂ ಅದೇ ರೀತಿ ಕರೆಯಬಹುದೇನೋ~ ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ನಂತರ ದಿಗ್ವಿಜಯ್ ಸಿಂಗ್ ಅವರು ತಮ್ಮ ಹೇಳೀಕೆಗಾಗಿ ಕ್ಷಮೆ ಯಾಚಿಸಿದ್ದರು.
ಗೃಹ ಸಚಿವರ ಅದೃಷ್ಟ ಆರಂಭದಲ್ಲಿ ಚೆನ್ನಾಗಿತ್ತು. 2010ರಿಂದೀಚೆಗೆ ನಡೆದ ಕೆಲವು ಹಿಂಸಾಚಾರ ಮತ್ತು ಬಾಂಬ್ ಸ್ಫೋಟಗಳು ಅವರನ್ನು ಕಂಗೆಡಿಸಿದವು. ಪುಣೆಯ ಜರ್ಮನ್ ಬೇಕರಿ ಸ್ಫೋಟ, ವಾರಣಾಸಿ ಮತ್ತು ದೆಹಲಿ ಸ್ಫೋಟ, ನಕ್ಸಲೀಯರಿಂದ ಮೀಸಲು ಪಡೆಗಳ ಮೇಲೆ ಪದೇಪದೇ ದಾಳಿ ಇವೇ ಮೊದಲಾದ ಘಟನೆಗಳು ಗೃಹ ಸಚಿವರ ವರ್ಚಸ್ಸನ್ನು ಕುಂದಿಸಿದವು.
`ಕಳ್ಳಗಿವಿ~ ಬಹಿರಂಗ: ಈ ಘಟನೆಗಳು ಸಾಲದು ಎಂಬಂತೆ ಕಳೆದ ಜೂನ್‌ನಲ್ಲಿ ಹಣಕಾಸು ಸಚಿವಾಲಯದಲ್ಲಿ `ಕಳ್ಳಗಿವಿ~ (ಕದ್ದಾಲಿಸುವ ಉಪಕರಣ) ಇಟ್ಟ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಯಿತು. ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಅವರ ಸಲಹೆಗಾರರ ಆಪ್ತ ಕಾರ್ಯದರ್ಶಿ ಮತ್ತು ಎರಡು ಸಭಾ ಕೊಠಡಿಗಳಲ್ಲಿ `ಕಳ್ಳಗಿವಿ~ ಅಳವಡಿಸಿದ ವಿಚಾರ ಬಹಿರಂಗಗೊಂಡು ಮುಖರ್ಜಿ ಪ್ರಧಾನಿಗೆ ಪತ್ರ ಬರೆದು ಗೋಪ್ಯ ವಿಚಾರಣೆ ನಡೆಸುವಂತೆ ಆಗ್ರಹಿಸಿದರು.
ಈ ಇಬ್ಬರು ಸಚಿವರ ನಡುವಿನ ವೈಯಕ್ತಿಕ ದ್ವೇಷವೇ `ಕಳ್ಳಗಿವಿ~ ಪ್ರಕರಣಕ್ಕೆ ಕಾರಣ ಎಂದು ವಿರೋಧ ಪಕ್ಷಗಳು ವ್ಯಾಖ್ಯಾನಿಸಿದವು.
ಇತ್ತೀಚೆಗೆ ಮುಖರ್ಜಿ ಅವರು ಪ್ರಧಾನಿ ಅವರಿಗೆ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಕಳುಹಿಸಿದ್ದ ಗೋಪ್ಯ ಟಿಪ್ಪಣಿ ಬಹಿರಂಗಗೊಂಡ ನಂತರ ಚಿದಂಬರಂ ವರ್ಚಸ್ಸು ಸಂಪೂರ್ಣ ಕುಗ್ಗಿದೆ ಹಾಗೂ ಮುಖರ್ಜಿ `ಕಳ್ಳಗಿವಿ~ ಪ್ರಕರಣಕ್ಕೆ ಪ್ರತಿಯಾಗಿ ಈ ಅವಕಾಶವನ್ನು ಬಳಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.