ಹೈದರಾಬಾದ್: ಆಂಧ್ರಪ್ರದೇಶದ ತೆಲಂಗಾಣ ಭಾಗದಲ್ಲಿ ಪ್ರಭಾವ ಹೊಂದಿರುವ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಅವರು ಕಾಂಗ್ರೆಸ್ ಜತೆಗಿನ ಚುನಾವಣೆ ಮೈತ್ರಿ ಸಾಧ್ಯತೆಯನ್ನು ಶನಿವಾರ ತಳ್ಳಿ ಹಾಕಿದ್ದಾರೆ.
ತೆಲಂಗಾಣ ಭಾಗದ ಜನರ ದಶಕಗಳ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಈಡೇರಿಸುವ ಮೂಲಕ ಚುನಾವಣೆಯಲ್ಲಿ ಲಾಭ ಪಡೆಯುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್‌ಗೆ ಟಿಆರ್‌ಎಸ್‌ನ ಈ ನಿರ್ಧಾರದಿಂದ ಭಾರಿ ಹಿನ್ನಡೆಯಾಗಿದೆ.
ಕಾಂಗ್ರೆಸ್ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಮತ್ತು ರಾವ್ ಮಧ್ಯೆ ಎರಡು ದಿನಗಳಿಂದ ನಡೆದ ಚುನಾವಣಾ ಮೈತ್ರಿ ಮಾತುಕತೆ ಮುರಿದು ಬಿದ್ದಿದೆ.
ತೆಲಂಗಾಣ ಭವನದಲ್ಲಿ ಶನಿವಾರ ನಡೆದ ಪಕ್ಷದ ಚುನಾವಣಾ ಸಮಿತಿ ಸಭೆಯ ನಂತರ ರಾವ್ ಈ ನಿರ್ಧಾರ ಪ್ರಕಟಿಸಿದರು. ತಮ್ಮ ಪಕ್ಷ ವಿಧಾನಸಭೆ ಮತ್ತು ಲೋಕಸಭೆಯ ಎಲ್ಲ ಕ್ಷೇತ್ರಗಳಿಗೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದರು.
ಕಾಂಗ್ರೆಸ್ ಜತೆ ಟಿಆರ್‌ಎಸ್ ವಿಲೀನವನ್ನು ತಿರಸ್ಕರಿಸಿದ್ದ ರಾವ್, 13 ವರ್ಷಗಳ ಹೋರಾಟದ ನಂತರ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಧೀನದಲ್ಲಿ ಪಕ್ಷದ ನಾಯಕರು ಚುನಾವಣೆಗೆ ಸ್ಪರ್ಧಿಸುವ ಅಗತ್ಯವೇನಿದೆ ಎಂಬ ನಿಲುವು ತಾಳಿದ್ದಾರೆ.
‘ನಮ್ಮ ಶಕ್ತಿ ಏನೆಂದು ದೆಹಲಿಗೆ ತೋರಿಸುತ್ತೇವೆ. ನಾಳೆಯಿಂದ ಕಾಂಗ್ರೆಸ್ ವಿರುದ್ಧದ ನಮ್ಮ ಹೋರಾಟ ಆರಂಭವಾಗಲಿದೆ. ಕಾಂಗ್ರೆಸ್ ಶಾಸಕರು ಮತ್ತು ಸಂಸದರು ಟಿಆರ್‌ಎಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ’ ಎಂದು ರಾವ್ ತಿಳಿಸಿದರು.
ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಮಾಜಿ ಗೃಹ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಮತ್ತು ಅವರ ಪುತ್ರ ಕಾರ್ತಿಕ್ ರೆಡ್ಡಿ ಕಾಂಗ್ರೆಸ್ ತೊರೆದು ಟಿಆರ್‌ಎಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ತೆಲಂಗಾಣದ ಒಟ್ಟು 17 ಲೋಕಸಭಾ ಸ್ಥಾನಗಳ ಪೈಕಿ ಟಿಆರ್‌ಎಸ್ 11 ಸ್ಥಾನಗಳಲ್ಲಿ ಹಾಗೂ 119 ವಿಧಾನಸಭಾ ಕ್ಷೇತ್ರಗಳಲ್ಲಿ 74 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿ ಸಮೀಕ್ಷೆಯಲ್ಲಿ ಹೇಳಲಾಗಿತ್ತು.
ಸದ್ಯದ ಸ್ಥಿತಿ ಪ್ರಕಾರ ಟಿಆರ್‌ಎಸ್ ಹತ್ತು ಜಿಲ್ಲೆಗಳ ಪೈಕಿ ಆರು ಜಿಲ್ಲೆಗಳಲ್ಲಿ ಪ್ರಭಾವ ಹೊಂದಿದೆ. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ಬಿಜೆಪಿ ಜತೆ ಕೈಜೋಡಿಸುವ ಸಾಧ್ಯತೆ ಇದೆ.
ಹೀಗಾಗಿ ಟಿಆರ್‌ಎಸ್ ಸಿಪಿಐ ಮತ್ತು ಎಂಐಎಂ ಜತೆ ಮೈತ್ರಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆಂಧ್ರಪ್ರದೇಶದಲ್ಲಿ ರಾಜಕೀಯ ಪಕ್ಷಗಳ ಹೊಂದಾಣಿಕೆಯ ಚಿತ್ರಣ ಇನ್ನೂ ಸ್ಪಷ್ಟವಾಗಿಲ್ಲ.
ಕೊಟ್ಟ ಮಾತಿಗೆ ತಪ್ಪಿದ್ದಾರೆ–ಕಾಂಗ್ರೆಸ್
ಮೈತ್ರಿ ಕುರಿತ ಟಿಆರ್‌ಎಸ್ ನಿರ್ಧಾರ ಕಾಂಗ್ರೆಸ್‌ಗೆ ಆಘಾತ ನೀಡಿದೆ. ಚಂದ್ರಶೇಖರ ರಾವ್ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್, ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಆರೋಪಿಸಿದೆ. ಟಿಆರ್‌ಎಸ್ ಜತೆ ಹೋಗುವ ಬದಲು ಏಕಾಂಗಿಯಾಗಿ ಚುನಾವಣೆ ಎದುರಿಸುವ ಇಂಗಿತವನ್ನು ರಾಜ್ಯ ನಾಯಕತ್ವ ವ್ಯಕ್ತಪಡಿಸಿದೆ.
‘ಕಾಂಗ್ರೆಸ್‌ಗೆ ಟಿಆರ್‌ಎಸ್ ವಿಲೀನ ಅಥವಾ ಮೈತ್ರಿಯ ಅಗತ್ಯ ಇರಲಿಲ್ಲ. ಟಿಆರ್‌ಎಸ್ ಮೈತ್ರಿಗೆ ಮುಂದಾಗಿತ್ತು. ಏಕಾಂಗಿಯಾಗಿ ಹೋರಾಡುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ’ ಎಂದು ತೆಲಂಗಾಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪೊನ್ನಲ ಲಕ್ಷ್ಮಯ್ಯ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.