ADVERTISEMENT

ಕಾಂಗ್ರೆಸ್ ಎರಡನೇ ಪಟ್ಟಿ ಇನ್ನೂ ವಿಳಂಬ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶದಿಂದ ಹಿಂತಿರುಗಿದರೂ ಬಿಕ್ಕಟ್ಟು ಮಾತ್ರ ಬಗೆಹರಿದಿಲ್ಲ. ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಿಗೆ  ಪರಿಹಾರ ಸಿಗದಿರುವುದರಿಂದ ಎರಡನೇ ಪಟ್ಟಿ ಪ್ರಕಟಣೆ ಇನ್ನೂ ವಿಳಂಬವಾಗಲಿದೆ.

ಗೋವಾ ಮಾಜಿ ಮುಖ್ಯಮಂತ್ರಿ ಲುಸಿಯಾನ್ಹೊ ಫೆಲೆರೊ ನೇತೃತ್ವದ `ಅಭ್ಯರ್ಥಿಗಳ ಆಯ್ಕೆ ಸಮಿತಿ' ಶುಕ್ರವಾರ ಸುಮಾರು ಎರಡೂವರೆ ತಾಸು ಸೋನಿಯಾ ಅವರ ಜತೆ ಚರ್ಚಿಸಿದರೂ 47 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ತೆರೆ ಬೀಳಲಿಲ್ಲ. ಸಂಜೆ ನಾಲ್ಕಕ್ಕೆ ಆರಂಭವಾದ ಸಭೆ 6.30ರ ವರೆಗೂ ಎಳೆಯಿತು.

ಸಮಿತಿ ಸದಸ್ಯರಾದ ಕೇಂದ್ರ ಸಚಿವ ಜಿತೇಂದ್ರ ಪ್ರಸಾದ್, ರಾಜ್ಯದ ಉಸ್ತುವಾರಿ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಚುನಾವಣಾ ಸಮಿತಿ ಸದಸ್ಯ ಆಸ್ಕರ್ ಫರ್ನಾಂಡಿಸ್ ಸಭೆಯಲ್ಲಿ ಭಾಗವಹಿಸಿದ್ದರು.

ಸೋನಿಯಾ ಅವರ ಮನೆಯಲ್ಲಿ ಅಪೂರ್ಣಗೊಂಡ ಸಭೆ ಪಕ್ಕದಲ್ಲೇ ಇರುವ ಎಐಸಿಸಿ ಕಚೇರಿಯಲ್ಲಿ ಮುಂದುವರಿಯಿತು. ಕಾಂಗ್ರೆಸ್ ಅಧ್ಯಕ್ಷರು, ರಾಜ್ಯದ  ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆಸ್ಕರ್ ಮತ್ತು ಮಿಸ್ತ್ರಿ, ಅಭ್ಯರ್ಥಿಗಳ ಪಟ್ಟಿ ಭಾನುವಾರ ಪ್ರಕಟವಾಗುವ ನಿರೀಕ್ಷೆಯಿದೆ ಎಂದರು. ಆದರೆ, ಎಐಸಿಸಿ ಮೂಲಗಳ ಪ್ರಕಾರ ನಾಮಪತ್ರ ಸಲ್ಲಿಕೆಗಿರುವ ಕೊನೆ ಗಳಿಗೆವರೆಗೆ ಪ್ರಕ್ರಿಯೆ ಎಳೆದಾಡುವ ಸಂಭವವಿದೆ.

ಪಕ್ಷದೊಳಗಿನ ಬಂಡಾಯ ತಡೆಯಲು ಹಾಗೂ ಟಿಕೆಟ್ ತಪ್ಪಿದವರು ಬೇರೆ ಪಕ್ಷಗಳಿಗೆ ವಲಸೆ ಹೋಗದಂತೆ ಎಚ್ಚರ ವಹಿಸಲು ಅಭ್ಯರ್ಥಿ ಪಟ್ಟಿ ವಿಳಂಬ ಮಾಡುವ ಉದ್ದೇಶ ಹೈಕಮಾಂಡ್‌ಗಿದೆ ಎಂದು ಮೂಲಗಳು ವಿವರಿಸಿವೆ.

ದಾವಣಗೆರೆ ದಕ್ಷಿಣ, ಉತ್ತರ, ಬಳ್ಳಾರಿ (ಸಾಮಾನ್ಯ), ಸಿ.ವಿ. ರಾಮನ್‌ನಗರ, ಜಯನಗರ, ಮಹಾದೇವಪುರ, ಕೆ.ಆರ್.ಪುರಂ, ಬೆಂಗಳೂರು ದಕ್ಷಿಣ, ಹೆಬ್ಬಾಳ ಸೇರಿದಂತೆ ಅನೇಕ ಕ್ಷೇತ್ರಗಳ ಬಿಕ್ಕಟ್ಟು ಯಥಾಸ್ಥಿತಿ ಮುಂದುವರಿದಿದೆ. ಈ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪರಮೇಶ್ವರ್ ಮತ್ತು ಸಿದ್ದರಾಮಯ್ಯನವರ ಅಭಿಪ್ರಾಯ ಪಡೆಯಲಾಗಿದೆ. ಮಿಕ್ಕಂತೆ ಆಸ್ಕರ್ ಮತ್ತಿತರರು ಕುಳಿತು ಚರ್ಚೆ ಮಾಡಿ ಅಭ್ಯರ್ಥಿಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವರು. ಅನಂತರ ಸೋನಿಯಾ ಒಪ್ಪಿಗೆ ನೀಡಲಿದ್ದಾರೆ.

ಆಯ್ಕೆ ಸಮಿತಿ 47ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೀಡಿರುವ ಶಿಫಾರಸು ಪಟ್ಟಿಯಲ್ಲಿರುವ ಪ್ರತಿಯೊಂದು ಹೆಸರನ್ನು ಸೋನಿಯಾ ಪರಿಶೀಲಿಸಿದರು. `ಕೆಲವು ಕ್ಷೇತ್ರಗಳ ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ' ಎಂದು ಬಂದಿರುವ ದೂರುಗಳಿಗೆ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ನಾಯಕರು ಟಿಕೆಟ್ ಹಂಚಿಕೆ ಕ್ರಮ ಸಮರ್ಥಿಸಿಕೊಂಡರು.

ಮೊದಲ ಹಂತದಲ್ಲಿ ಪ್ರಕಟವಾಗಿರುವ 177 ಕ್ಷೇತ್ರಗಳ ಪೈಕಿ ಶೇ 50ರಷ್ಟಕ್ಕೆ ಮಾತ್ರ ಇದುವರೆಗೆ `ಬಿ ಫಾರಂ' ನೀಡಲಾಗಿದೆ.

ಉಳಿದವರಿಗೆ `ಬಿ ಫಾರಂ' ನೀಡಿಕೆ ಪ್ರಕ್ರಿಯೆ ತಡೆಹಿಡಿಯಬಹುದು. ಅಗತ್ಯವಾದರೆ ಕೆಲವು ಕಡೆ ಅಭ್ಯರ್ಥಿಗಳನ್ನು ಬದಲಾವಣೆ ಮಾಡಬಹುದು ಎಂದು ರಾಜ್ಯ ಕಾಂಗ್ರೆಸ್ ನಾಯಕರು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ವಾತಾವರಣವಿದೆ. ಈ ಅವಕಾಶ ಕಳೆದುಕೊಳ್ಳಬಾರದು. ಅರ್ಹರಿಗೆ ಟಿಕೆಟ್ ಕೊಡಬೇಕು. ಬಿರುಸಿನ ಪ್ರಚಾರ ನಡೆಸಬೇಕೆಂದು ಸೋನಿಯಾ ಸಲಹೆ ಮಾಡಿದರು.

ಹಿರಿಯ ಕಾಂಗ್ರೆಸ್ ನಾಯಕರ ಹತ್ತಿರದ ಸಂಬಂಧಿಕರಿಗೆ ಟಿಕೆಟ್ ನೀಡುವ ವಿಚಾರವೂ ಸೋನಿಯಾ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಯಿತು.

ಕೆಜಿಎಫ್‌ನಿಂದ ತಮ್ಮ ಪುತ್ರಿ ರೂಪಕಲಾ ಅವರ ಟಿಕೆಟ್‌ಗೆ ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಚನ್ನಪಟ್ಟಣದ ಟಿಕೆಟ್‌ಗೆ ಚಾತಕ ಪಕ್ಷಿಯಂತೆ ಕಾದಿರುವ ಸಿ.ಪಿ. ಯೋಗೀಶ್ವರ್, ಮಾಯಕೊಂಡದ ಟಿಕೆಟ್ ಆಕಾಂಕ್ಷಿ ರಾಮಪ್ಪ, ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದಿಂದ ಟಿಕೆಟ್ ಕೇಳಿರುವ ದೀಪಕ್ ಚಿಂಚೋರೆ ಸೇರಿದಂತೆ ಅನೇಕರು ಎಐಸಿಸಿ ಕಚೇರಿಯಲ್ಲಿ ಕಾದಿದ್ದರು. ಇವರೆಲ್ಲರಿಗೂ ಭಾನುವಾರದವರೆಗೆ ಕಾಯಿರಿ ಎಂದು ಆಸ್ಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.