ನವದೆಹಲಿ (ಪಿಟಿಐ): ಕಾಂಗ್ರೆಸ್ ಒಂದು `ಮುಳುಗುತ್ತಿರುವ ಹಡಗು' ಎಂದು ಬಣ್ಣಿಸಿರುವ ಬಿಜೆಪಿ ಮುಖಂಡ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರು ಕಾಂಗ್ರೆಸ್‌ನ ಹಿರಿಯ ಮುಖಂಡರು ಪಕ್ಷ ತ್ಯಜಿಸಲು ನಿರ್ಧರಿಸುತ್ತಿರುವಾಗಲೇ, ಕೆಲವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸುತ್ತಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.
ಈ ಕುರಿತಂತೆ ತಮ್ಮ ಬ್ಲಾಗ್‌ನಲ್ಲಿ ಬರೆದಿರುವ ಅವರು `ಸೋಲುವ ಭಯದಿಂದ ಮುಳುಗುತ್ತಿರುವ ಕಾಂಗ್ರೆಸ್ ಹಡಗನ್ನು ತೊರೆಯಲು ಹಲವು ಮುಖಂಡರು ನಿರ್ಧರಿಸಿರುವಾಗಲೇ, ಕೆಲವರು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸುತ್ತಿದ್ದಾರೆ. ಉಳಿದವರು ಅನಾರೋಗ್ಯದ ಕಟ್ಟುಕಥೆ ಹೇಳಿ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ' ಎಂದಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ದಾಳಿ ನಡೆಸಿರುವ ಜೇಟ್ಲಿ ಅವರು `ಚುನಾವಣಾ ಪೂರ್ವ ಸಮೀಕ್ಷೆಗಳ ಫಲಿತಾಂಶಗಳನ್ನು ಹಾಸ್ಯಾಸ್ಪದ ಎಂದು ಅವರು (ರಾಹುಲ್) ಕರೆದಿರುವುದು, ಮುಳುಗುತ್ತಿರುವ ಪಕ್ಷದ ನೈತಿಕತೆಯನ್ನು ಎತ್ತಿಹಿಡಿಯುವುದಕ್ಕಾಗಿ ಹೇಳುತ್ತಿರುವ ಬಡಿವಾರದ ಮಾತುಗಳೆಂದು ಅರ್ಥಮಾಡಿಕೊಳ್ಳಬಹುದಾಗಿದೆ. ಒಂದೊಮ್ಮೆ ಅವರು ಇದನ್ನು ಪ್ರಾಮಾಣಿಕವಾಗಿ ನಿಜವೆಂದು ಒಪ್ಪಿಕೊಳ್ಳದಿದ್ದರೆ ವಾಸ್ತವವೇ ಅವರಿಗೆ ಅರ್ಥವಾಗಿಲ್ಲ ಎಂದು ಭಾವಿಸಬಹುದು ' ಎಂದು ಬರೆದಿದ್ದಾರೆ.
ಕಳೆದ ಬಾರಿ ಯುಪಿಎಯೊಂದಿಗೆ ಮೈತ್ರಿಯನ್ನು ವಿಸ್ತರಿಸಿದ್ದ ಹಲವು ಮಿತ್ರಪಕ್ಷಗಳು ಇದೀಗ ಕಾಂಗ್ರೆಸ್‌ನಿಂದ ತಾವಾಗಿಯೇ ದೂರ ಸರಿಯುತ್ತಿವೆ ಎಂದು ಜೇಟ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.