ADVERTISEMENT

ಕಾನೂನು ಬಾಹಿರ ಚಟುವಟಿಕೆ: 81 ಅಧಿಕಾರಿಗಳಿಗೆ ದಂಡ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

ನವದೆಹಲಿ (ಪಿಟಿಐ): ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರೂ ಸೇರಿದಂತೆ ಭ್ರಷ್ಟಾಚಾರದಲ್ಲಿ ತೊಡಗಿದ್ದ 81 ಸರ್ಕಾರಿ ಅಧಿಕಾರಿಗಳಿಗೆ ಕೇಂದ್ರ ಜಾಗೃತ ಆಯೋಗ (ಸಿವಿಸಿ) ದಂಡ ವಿಧಿಸಿದೆ.

ಇವರಲ್ಲಿ 36 ಮಂದಿ ಬ್ಯಾಂಕ್ ಉದ್ಯೋಗಿಗಳಾಗಿದ್ದು, ಸಿಂಡಿಕೇಟ್ ಬ್ಯಾಂಕ್‌ನ ಹತ್ತು ಜನ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಒಂಬತ್ತು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಐವರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಾಲ್ವರು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೂವರು, ದೇನಾ ಬ್ಯಾಂಕ್‌ನ ಇಬ್ಬರು, ಅಲಹಾಬಾದ್ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲದ ತಲಾ ಒಬ್ಬ ಅಧಿಕಾರಿಗೆ ದಂಡ ವಿಧಿಸಲಾಗಿದೆ ಎಂದು ಆಯೋಗ 2011ರ ನವೆಂಬರ್ ತಿಂಗಳ ವರದಿಯಲ್ಲಿ ತಿಳಿಸಿದೆ.

ಇದಲ್ಲದೇ ವೆಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ ಹತ್ತು ಅಧಿಕಾರಿಗಳು, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಎಂಟು ಜನ, ರೈಲ್ವೆ ಸಚಿವಾಲಯದ ಏಳು, ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮತ್ತು ದೆಹಲಿ ಮಹಾನಗರಪಾಲಿಕೆಯ ಮೂವರು ಅಧಿಕಾರಿಗಳೂ ದಂಡ ತೆರಬೇಕಾಗಿದೆ.

ವಿವಿಧ ಸರ್ಕಾರಿ ಇಲಾಖೆ ಮತ್ತು ಕಚೇರಿಗಳಲ್ಲಿ ನವೆಂಬರ್ ತಿಂಗಳು ತಪಾಸಣೆ ನಡೆಸಿದ ಸಂದರ್ಭದಲ್ಲಿ 1.44 ಕೋಟಿ ರೂಪಾಯಿ ಅಕ್ರಮ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು 1,697 ದೂರುಗಳು ಆಯೋಗಕ್ಕೆ ಬಂದಿದ್ದವು.

ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು ಮತ್ತು ಕಾಂಡ್ಲಾ ಪೋರ್ಟ್ ಟ್ರಸ್ಟ್‌ನಲ್ಲಿ ಖಾಲಿ ಇರುವ ಮುಖ್ಯ ಜಾಗೃತ ಅಧಿಕಾರಿಗಳ (ಸಿವಿಒ) ಹುದ್ದೆ ಭರ್ತಿ ಕಾರ್ಯ ವಿಳಂಬ ಆಗುತ್ತಿರುವುದಕ್ಕೆ ಆಯೋಗ ವರದಿಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.