
ನವದೆಹಲಿ (ಪಿಟಿಐ): ಶುಕ್ರವಾರಕ್ಕೆ ನಿಗದಿಯಾಗಿದ್ದ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಯನ್ನು ಭಾರತ ಮತ್ತು ಪಾಕಿಸ್ತಾನ ಮುಂದೂಡಿವೆ. ಅತಿ ಶೀಘ್ರದಲ್ಲಿಯೇ ಮಾತುಕತೆ ನಡೆಯಲಿದೆ ಎಂದು ಎರಡೂ ದೇಶಗಳು ಹೇಳಿವೆ.
ಪಠಾಣ್‌ಕೋಟ್ ದಾಳಿಯ ಸಂಚು ನಡೆಸಿರುವ ಜೈಷ್–ಎ–ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ವಿರುದ್ಧ ಪಾಕಿಸ್ತಾನ ಕೈಗೊಂಡಿರುವ ಕ್ರಮಗಳನ್ನು ಭಾರತ ಸ್ವಾಗತಿಸಿದೆ. ವಾಯುನೆಲೆ ಮೇಲಿನ ದಾಳಿ ತನಿಖೆಗಾಗಿ ಪಾಕಿಸ್ತಾನದ ವಿಶೇಷ ತನಿಖಾ ತಂಡವನ್ನು ಸ್ವಾಗತಿಸಲಾಗುವುದು ಎಂದು ಭಾರತ ಹೇಳಿದೆ.
ಹಲವು ಜೈಷೆ ಉಗ್ರರನ್ನು ವಶಕ್ಕೆ ಪಡೆದಿರುವ ಪಾಕ್‌ನ ಕ್ರಮ ‘ಮಹತ್ವಪೂರ್ಣ ಮತ್ತು ಮೊದಲ ಮಹತ್ವದ ಹೆಜ್ಜೆ’ ಎಂದು ಭಾರತ ಬಣ್ಣಿಸಿದೆ. ಆದರೆ ಮಸೂದ್ ಅಜರ್‌ನನ್ನು ವಶಕ್ಕೆ ಪಡೆದಿರುವುದನ್ನು ಪಾಕ್ ಇನ್ನೂ ದೃಢಪಡಿಸಿಲ್ಲ.
ದಾಳಿಯಲ್ಲಿ ಪಾಕ್ ಉಗ್ರರು ಭಾಗಿಯಾಗಿರುವ ಬಗೆಗಿನ ತನಿಖೆ ‘ಗಮನಾರ್ಹ ಪ್ರಗತಿ’ ಸಾಧಿಸಿದೆ ಎಂಬುದನ್ನು ಬುಧವಾರ ಪಾಕ್ ಬಿಡುಗಡೆ ಮಾಡಿರುವ ಹೇಳಿಕೆ ಸ್ಪಷ್ಟಪಡಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.